ಕಾರ್ಗಿಲ್: ಪಾಕ್ ಮೇಲೆ ಬಾಂಬ್ ದಾಳಿಗೆ ಮುಂದಾಗಿದ್ದ ವಾಯುಪಡೆ
ಹೊಸದಿಲ್ಲಿ, ಜು.20: ಭಾರತೀಯ ವಾಯುಪಡೆ 1999ರ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನದ ಆಯಕಟ್ಟಿನ ಮತ್ತು ಪ್ರಮುಖ ಪ್ರದೇಶಗಳ ಮೇಲೆ ಬಾಂಬ್‌ದಾಳಿ ನಡೆಸಲು ವಿಸ್ತೃತ ಯೋಜನೆಯನ್ನು ರೂಪಿಸಿತ್ತು. ಭಾರತೀಯ ವಾಯುಪಡೆೆಯ ಗುರಿ ಕರಾಚಿ ಬಂದರು ಆಗಿತ್ತು ಎಂಬ ಅಂಶ ಬಹಿರಂಗವಾಗಿದೆ.
ಆದರೆ ಈ ರೂಪುರೇಷೆಗಳ ಅನುಷ್ಠಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅವಕಾಶ ನೀಡಲಿಲ್ಲ. ಮೇ 25ರಂದು ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಅಂದಿನ ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಎ.ವೈ.ಟಿಪ್ನಿಸ್ ಅವರಿಗೆ ಸ್ಪಷ್ಟ ಸೂಚನೆ ನೀಡಿ, ಪಾಕಿಸ್ತಾನದ ಒಳ ಹೊಕ್ಕು ಬಾಂಬ್ ದಾಳಿ ನಡೆಸುವುದು ಬಿಡಿ, ಯಾವುದೇ ಕಾರಣಕ್ಕೆ ನಿಮ್ಮ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯ ಸರಹದ್ದು ಮೀರಿ ಹೋಗಬಾರದು ಎಂದು ಹೇಳಿತ್ತು. ಈ ಸಂದರ್ಭದಲ್ಲಿ ಟಿಪ್ನಿಸ್ ಅವರು, ಗಡಿ ನಿಯಂತ್ರಣ ರೇಖೆಯನ್ನು ಸ್ವಲ್ಪಮಟ್ಟಿಗೆ ಉಲ್ಲಂಘಿಸಿ, ಆಯಕಟ್ಟಿನ ಜಾಗವನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಡಲು ಟಿಪ್ನಿಸ್ ವೈಯಕ್ತಿಕ ನೆಲೆಯಲ್ಲಿ ಕೂಡಾ ಅನುಮತಿ ಕೋರಿದ್ದರು.
ವಾಯುಪಡೆ ಎಲ್‌ಒಸಿಯನ್ನು ಸ್ವಲ್ಪಮಟ್ಟಿಗೆ ಮೀರಿ ಮುನ್ನಡೆಯಲು ಕೋರಿದ್ದ ಅವಕಾಶವನ್ನು ಸರಕಾರ ಖಡಾಖಂಡಿತವಾಗಿ ನಿರಾಕರಿಸಿತ್ತು. ವಾಜಪೇಯಿ ಸ್ವತಃ ನೇರವಾಗಿ, ದಯವಿಟ್ಟು, ಎಲ್‌ಒಸಿ ಉಲ್ಲಂಘಿಸಬೇಡಿ ಎಂದಿದ್ದರು ಎಂಬುದನ್ನು ಎ.ವೈ.ಟಿಪ್ನೀಸ್ ನೆನಪಿಸಿಕೊಂಡರು. ಭಾರತದ ಈ ಸ್ವಯಂ ನಿಯಂತ್ರಣದಿಂದಾಗಿ ಕಾರ್ಗಿಲ್ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತನೆಯಾಗಲಿಲ್ಲ. ಈ ಸಂದರ್ಭದಲ್ಲಿ ಅಮೆರಿಕ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಮೇಲೆ ಒತ್ತಡ ಹೇರಿ, ಕಾರ್ಗಿಲ್‌ನಿಂದ ಸೇನೆ ವಾಪಸು ಪಡೆಯುವಂತೆ ಸೂಚಿಸಿತ್ತು.
ಭಾರತೀಯ ಸೇನೆ ಮೇ 26ರಂದು ಆರಂಭಿಸಿದ್ದ ಪ್ರತಿದಾಳಿಗೆ ಪೂರಕವಾಗಿ, ಆಕ್ರಮಣಕಾರಿ ದಾಳಿಗೆ ವಾಯುಪಡೆ ಮುಂದಾಗಿತ್ತು. ಆದರೆ ಎಲ್ಲ ಭಾರತೀಯ ಮಿಗ್-21, ಮಿಗ್-27 ಹಾಗೂ ಮೀರಜ್-2000 ಯುದ್ಧ ವಿಮಾನಗಳು ಗಡಿಯೊಳಗಿನಿಂದಲೇ ದಾಳಿ ನಡೆಸಿದವು ಎಂದು ಎನ್‌ಡಿಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ.