ಪಕ್ಷ ಸಹೋದ್ಯೋಗಿಯ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಆಪ್ ಕಾರ್ಯಕರ್ತೆ ಆತ್ಮಹತ್ಯೆ
ಹೊಸದಿಲ್ಲಿ, ಜು.20: ತನ್ನ ಪಕ್ಷದ ಸಹೋದ್ಯೋಗಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ದಿಲ್ಲಿಯ ಎಎಪಿ ಕಾರ್ಯಕರ್ತೆಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಿಳೆ ದೂರು ನೀಡಿದ್ದ ವ್ಯಕ್ತಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಆಕೆ ಖಿನ್ನತೆಗೆ ಒಳಗಾಗಿದ್ದರೆಂದು ಕುಟುಂಬಿಕರು ಪ್ರತಿಪಾದಿಸಿದ್ದಾರೆ. ಆರೋಪಿಯನ್ನು ಎಎಪಿ ಪಕ್ಷದಿಂದ ಹೊರ ಹಾಕಿದೆಯಾದರೂ ದಿಲ್ಲಿ ಸರಕಾರವು ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ.
ನರೇಲಾದಲ್ಲಿ ಎಎಪಿ ಕಾರ್ಯಕರ್ತೆಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಉತ್ತರ ಜಿಲ್ಲಾ ದಂಡಾಧಿಕಾರಿ ತನಿಖೆ ನಡೆಸಲಿದ್ದಾರೆಂದು ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಟ್ವೀಟಿಸಿದ್ದಾರೆ.
ವಾಯವ್ಯ ದಿಲ್ಲಿಯ ನರೇಲಾದ ತನ್ನ ಮನೆಯಲ್ಲಿ ವಿಷ ಸೇವಿಸಿದ್ದ ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಅಸಹಜ ರೀತಿಯಲ್ಲಿ ಮೈ ಮುಟ್ಟಿದ್ದುದಕ್ಕಾಗಿ ಮಹಿಳೆಯು ಪಕ್ಷದ ಸಹೋದ್ಯೋಗಿ ರಮೇಶ್ ವಧ್ವಾ ಎಂಬಾತನ ವಿರುದ್ಧ ದೂರು ದಾಖಲಿಸಿದ್ದರು. ಜೂನ್‌ನಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಎಎಪಿ ಶಾಸಕರೊಬ್ಬರು ವಧ್ವಾನ ರಕ್ಷಣೆಗೆ ನಿಂತಿದ್ದಾರೆಂದು ಮಹಿಳೆ ಶಂಕಿಸಿದ್ದಳೆಂದು ಕುಟುಂಬ ಹೇಳಿದೆ.