ವಿಶ್ವಾಸಮತ ಗೆದ್ದ ಖಂಡು ಸರಕಾರ
ಇಟಾನಗರ,ಜು.20: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಏಳುಬೀಳುಗಳಿಗೆ ಸಾಕ್ಷಿಯಾಗಿದ್ದ ಅರುಣಾಚಲ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ ಪೆಮಾ ಖಂಡು ನೇತೃತ್ವದ ಕಾಂಗ್ರೆಸ್ ಸರಕಾರವು ಬುಧವಾರ ವಿಧಾನಸಭೆಯಲ್ಲಿ ನಡೆದ ಬಲಾಬಲ ಪರೀಕ್ಷೆಯಲ್ಲಿ ವಿಜಯ ಸಾಧಿಸಿದೆ. ಮುಖ್ಯ ಮಂತ್ರಿಯವರು ಮಂಡಿಸಿದ ವಿಶ್ವಾಸಮತ ಗೊತ್ತುವಳಿಯ ಪರ 46 ಶಾಸಕರು ಮತ್ತು ವಿರುದ್ಧವಾಗಿ 11 ಶಾಸಕರು ಮತಗಳನ್ನು ಚಲಾಯಿಸಿದರು.
ಬುಧವಾರ ವಿಧಾನಸಭೆಯ ಅಧಿವೇಶನವನ್ನು ಕರೆಯುವಂತೆ ಮಂಗಳವಾರ ರಾತ್ರಿ ತುರ್ತು ಆದೇಶವನ್ನು ಹೊರಡಿಸಿದ್ದ ರಾಜ್ಯಪಾಲ ತಥಾಗತ ರಾಯ್ ಅವರು, ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಗೊಳಿಸುವಂತೆ ಖಂಡು ಅವರಿಗೆ ಸೂಚಿಸಿದ್ದರು.
ಬೆಳಗ್ಗೆ ಡೆಪ್ಯುಟಿ ಸ್ಪೀಕರ್ ತೆಂಝಿಂಗ್ ನೊರ್ಬು ಅವರ ಅಧ್ಯಕ್ಷತೆಯಲ್ಲಿ ಸದನವು ಸಮಾವೇಶಗೊಂಡಾಗ ಮುಖ್ಯಮಂತ್ರಿಗಳು ವಿಶ್ವಾಸಮತವನ್ನು ಕೋರಿ ಮಂಡಿಸಿದ ಗೊತ್ತುವಳಿಯನ್ನು ಮಾಜಿ ಮುಖ್ಯಮಂತ್ರಿ ನಬಮ್ ಟುಕಿ ಅವರು ಅನುಮೋದಿಸಿದರು.
44 ಕಾಂಗ್ರೆಸ್ ಸದಸ್ಯರು ಮತ್ತು ಇಬ್ಬರು ಪಕ್ಷೇತರ ಸದಸ್ಯರು ಸರಕಾರದ ಪರವಾಗಿ ಮತ ಚಲಾಯಿಸಿದರು.
ರಾಜ್ಯದಲ್ಲಿ ತಿಂಗಳುಗಳ ಕಾಲ ರಾಜಕೀಯ ಪ್ರಕ್ಷುಬ್ಧತೆಯ ಬಳಿಕ ಜುಲೈ 17ರಂದು ಖಂಡು ಅರುಣಾಚಲ ಪ್ರದೇಶದ ಒಂಬತ್ತನೇ ಮುಖ್ಯಮಂತ್ರಿ ಯಾಗಿ ಪಟ್ಟಕ್ಕೇರಿದ್ದರು.
ಜುಲೈ 16ರಂದು ನಾಟಕೀಯ ವಿದ್ಯಮಾನವೊಂದ ರಲ್ಲಿ ಕಾಂಗ್ರೆಸ್ ಪಕ್ಷವು ನಬಮ್ ಟುಕಿಯವರ ಸ್ಥಾನದಲ್ಲಿ ಪೆಮಾ ಖಂಡು ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ತ್ವರಿತ ಗತಿಯಲ್ಲಿ ಸಂಭವಿಸಿದ ಬೆಳವಣಿಗೆಗಳಲ್ಲಿ ತನ್ನ ಗುಂಪಿನ ಶಾಸಕರೊಂದಿಗೆ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಶಾಸಕರ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ ಖಾಲಿಕೊ ಪುಲ್ ಅವರು ಸರ್ವೋಚ್ಚ ನ್ಯಾಯಾಲಯದಿಂದ ಪದಚ್ಯುತಗೊಂಡ ಬಳಿಕ 30 ಭಿನ್ನಮತೀಯ ಶಾಸಕರೊಂದಿಗೆ ಪಕ್ಷದ ಮಡಿಲಿಗೆ ಮರಳಿದ್ದರು.
60 ಸದಸ್ಯ ಬಲದ ರಾಜ್ಯ ವಿಧಾನಸಭೆಯು ಹಾಲಿ 58 ಸದಸ್ಯರನ್ನು ಹೊಂದಿದ್ದು, ಈ ಪೈಕಿ ಇಬ್ಬರು ಪಕ್ಷೇತರರು ಸೇರಿದಂತೆ 47 ಶಾಸಕರ ಬೆಂಬಲವನ್ನು ಕಾಂಗ್ರೆಸ್ ಹೊಂದಿದೆ. ಪ್ರತಿಪಕ್ಷ ಬಿಜೆಪಿ 11 ಶಾಸಕರನ್ನು ಹೊಂದಿದೆ.