×
Ad

ಲೋಕಸಭೆ ನಡುಗುವಂತೆ ಕಾಂಗ್ರೆಸ್ ಬೊಬ್ಬಿಡುತ್ತಿದ್ದರೆ ರಾಹುಲ್ ಸುಖನಿದ್ದೆಯಲ್ಲಿದ್ದರು!

Update: 2016-07-20 23:47 IST

ಹೊಸದಿಲ್ಲಿ, ಜು.20: ಗುಜರಾತ್‌ನ ಉನಾದಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ಸಮರ ಸಾರಿದ್ದರೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ನಿದ್ದೆಯೇ ಬಿಟ್ಟಿಲ್ಲ! ಪ್ರಕರಣದ ಕುರಿತು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮಾತನಾಡುತ್ತಿದ್ದರೆ, ರಾಹುಲ್ ಕುಳಿತಲ್ಲೇ ಗೊರಕೆ ಹೊಡೆಯುತ್ತಿದ್ದರು!

ರಾಹುಲ್ ಗುರುವಾರ ಉನಾಕ್ಕೆ ಭೇಟಿ ನೀಡಲಿದ್ದಾರೆ.
 ರಾಜನಾಥ ಸಿಂಗ್‌ರ ಹೇಳಿಕೆಯನ್ನು ಪ್ರತಿಭಟಿಸಲು ಕಾಂಗ್ರೆಸ್ ಸಿಡಿದೆದ್ದಿರುವಾಗ ರಾಹುಲ್ ತನ್ನ ಹಣೆಯನ್ನು ಅಂಗೈಯಲ್ಲಿರಿಸಿ ನಿದ್ದೆ ಮಾಡುತ್ತಿದ್ದುದನ್ನು ಟಿವಿ ವಾಹಿನಿಗಳು ಸ್ಪಷ್ಟವಾಗಿ ತೋರಿಸುತ್ತಿದ್ದವು. ಲೋಕಸಭೆಯಲ್ಲಿ ಅವರ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಹ ಸಂಸದರು ತಮ್ಮ ಆಕ್ಷೇಪವನ್ನು ತುದಿಗಾಲಲ್ಲಿ ನಿಂತು ಘೋಷಿಸುತ್ತಿದ್ದರೆ, ರಾಹುಲ್ ಸ್ವಪ್ನಲೋಕಕ್ಕೆ ಜಾರಿದ್ದರು. ವಿಷಯದ ಕುರಿತು ತನ್ನ ಪಕ್ಷೀಯರೇ ಅತ್ಯಂತ ಗಟ್ಟಿಯಾಗಿ ಗದ್ದಲ ಮಾಡುತ್ತಿದ್ದರೂ ಕಾಂಗ್ರೆಸ್‌ನ ಭವಿಷ್ಯದ ಮಹಾನಾಯಕನ ನೆಮ್ಮದಿಯ ನಿದ್ದೆಗೆ ಯಾವುದೇ ಭಂಗ ಉಂಟಾಗಲಿಲ್ಲ.
ಈ ಮೊದಲು ಪಕ್ಷದ ಸಂಸದೀಯ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್‌ನ ಗುಜರಾತ್ ಘಟಕವೂ ಮಂಗಳವಾರ ರಾಜ್ಯಪಾಲ ಒ.ಪಿ. ಕೊಹ್ಲಿಯವರನ್ನು ಭೇಟಿಯಾಗಿ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News