×
Ad

ಭಾರತೀಯ ಹಾಕಿ ತಂಡದ ಶ್ರೇಷ್ಠ ಆಟಗಾರ ಮುಹಮ್ಮದ್ ಶಾಹಿದ್ ನಿಧನಕ್ಕೆ ಸಂತಾಪ

Update: 2016-07-20 23:48 IST

ಹೊಸದಿಲ್ಲಿ, ಜು.20: ಮಾಸ್ಕೋದಲ್ಲಿ 1980ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತೀಯ ತಂಡದ ಸದಸ್ಯರಾಗಿದ್ದ ಭಾರತೀಯ ಹಾಕಿ ತಂಡದ ಶ್ರೇಷ್ಠ ಆಟಗಾರ ಮುಹಮ್ಮದ್ ಶಾಹಿದ್ ನಿಧನಕ್ಕೆ ಭಾರತೀಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

 ‘‘ನನಗೆ ಮಾತುಗಳೇ ಬರುತ್ತಿಲ್ಲ. ನಾನು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದಾಗ ಅವರ ಸ್ಥಿತಿ ಗಂಭೀರವಾಗಿತ್ತು. ಅವರ ನಿಧನದಿಂದ ಭಾರತೀಯ ಹಾಕಿಗೆ ಭಾರೀ ನಷ್ಟವಾಗಿದೆ. ಅವರೋರ್ವ ಜೀವಂತ ದಂತಕತೆಯಾಗಿದ್ದರು. ಹಾಕಿಯನ್ನು ವಿಭಿನ್ನ ಮಟ್ಟಕ್ಕೆ ಕೊಂಡೊಯ್ಯಿದಿದ್ದರು’’

ಪಿ.ಆರ್.ಶ್ರೀಜೇಶ್, ಭಾರತದ ಗೋಲ್‌ಕೀಪರ್ ಹಾಗೂ ರಿಯೋ ಒಲಿಂಪಿಕ್ಸ್ ತಂಡದ ನಾಯಕ

   ನಾವು ಭಾರತೀಯ ಹಾಕಿ ತಂಡದ ಐಕಾನ್ ಹಾಗೂ ಆಧಾರಸ್ತಂಭವನ್ನು ಕಳೆದುಕೊಂಡಿದ್ದೇವೆ. ಅವರು ನನ್ನ ಆದರ್ಶ ಆಟಗಾರನಾಗಿದ್ದರು. ಒಂದು ಹಂತದಲ್ಲಿ ಅವರಂತೆಯೇ ಆಗಬೇಕೆಂದು ಬಯಸಿದ್ದೆ. ಆದರೆ, ಮುಹಮ್ಮದ್ ಶಾಹಿದ್‌ಗೆ ಅವರೇ ಸಾಟಿ ಎಂದು ಮನವರಿಕೆಯಾಯಿತು. ನಾನು ದಾದಾ ಧ್ಯಾನ್‌ಚಂದ್‌ರನ್ನು ನೋಡಿಲ್ಲ. ನಾನು 1986ರಲ್ಲಿ ಬೆಂಗಳೂರಿನಲ್ಲಿ ಮುಹಮ್ಮದ್ ಶಾಹಿದ್‌ರನ್ನು ಮೊದಲ ಬಾರಿ ನೋಡಿದ್ದೆ. 1991ರಲ್ಲಿ ಸಂಜಯ್ ಗಾಂಧಿ ಟೂರ್ನಿಯಲ್ಲಿ ಅವರೊಂದಿಗೆ ಆಡುವ ಅವಕಾಶವೂ ಲಭಿಸಿತ್ತು. ಅವರಂತಹ ಆಟಗಾರನನ್ನು ಈ ತನಕ ನೋಡಿಲ್ಲ. ಝಾಫರ್ ಇಕ್ಬಾಲ್, ಲೆಸ್ಲೀ ಕ್ಲೌಡಿಯಸ್, ಎಂಎಂ ಸೋಮಯ ಹಾಗೂ ಜಾಕ್ವಿಮ್ ಕರ್ವಾಲ್ಲೊರನ್ನು ನೋಡುವ ಭಾಗ್ಯ ನನಗೆ ಲಭಿಸಿತ್ತು. ಆದರೆ, ಶಾಹಿದ್‌ಗಿಂತ ಉತ್ತಮ ಆಟಗಾರರಿಲ್ಲ. ಅವರು ಎಲ್ಲರಿಗಿಂತ ಭಿನ್ನ.

 ಧನರಾಜ್ ಪಿಳ್ಳೈ, ಭಾರತದ ಸಾರ್ವಕಾಲಿಕ ಶ್ರೇಷ್ಠ ಗೋಲ್‌ಸ್ಕೋರರ್.

ನನಗೆ ತುಂಬಾ ಬೇಸರವಾಗಿದೆ. ನಾನು ಓರ್ವ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆೆ. ನಾವಿಬ್ಬರು ಏಳು ವರ್ಷ ಒಟ್ಟಿಗೆ ಆಡಿದ್ದೇವೆ. ಅವರು ಹಾಕಿಗೆ ನೀಡಿದ ಕಾಣಿಕೆ ಅತ್ಯಮೂಲ್ಯ.

ಭಾರತದ ಮಾಜಿ ನಾಯಕ ಝಾಫರ್ ಇಕ್ಬಾಲ್.

ಶಾಹಿದ್ ನಿಧನದ ಸುದ್ದಿಯನ್ನು ಕೇಳಿ ಆಘಾತಗೊಂಡಿದ್ದೇನೆ. 80ರ ದಶಕದಲ್ಲಿ ಮಿಲಿಯನ್ ಜನರು ಅವರನ್ನು ಹಿಂಬಾಲಿಸುತ್ತಿದ್ದರು. ಶಾಹಿದ್ ಹಾಗೂ ಝಾಫರ್ ಅವರು ಆಟ ಶೈಲಿಯನ್ನು ನೋಡಲು ಎಲ್ಲರಿಗೂ ಇಷ್ಟವಾಗುತ್ತಿತ್ತು.

ಎಂಎಂ ಸೋಮಯ, ಶಾಹಿದ್‌ರೊಂದಿಗೆ ಮೂರು ಒಲಿಂಪಿಕ್ಸ್ ಆಡಿದ ಆಟಗಾರ.

ಲಕ್ನೋ ಸ್ಪೋರ್ಟ್ಸ್ ಹಾಸ್ಟೆಲ್ ತಂಡದೊಂದಿಗೆ ಆಗಾ ಖಾನ್ ಟೂರ್ನಮೆಂಟ್‌ನಲ್ಲಿ ಆಡಲು ಮುಂಬೈಗೆ ಆಗಮಿಸಿದ್ದ ಶಾಹಿದ್‌ರನ್ನು ನಾನು ಮೊದಲ ಬಾರಿ ನೋಡಿದ್ದೆ. 18-19ರ ಹರೆಯದಲ್ಲಿ ಅವರು ಅತ್ಯುತ್ತಮ ಆಟಗಾರನಾಗಿದ್ದರು. ಮೈದಾನದ ಹೊರಗೆ ನಾವಿಬ್ಬರೂ ಹಾಕಿ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದೆವು. ಕೋಲ್ಕತಾದಲ್ಲಿ ಮಾಜಿ ಆಟಗಾರ ಕ್ಲಾಡಿಯಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸ್ಟೇಜ್‌ನಲ್ಲಿ ಚಿತ್ರಗೀತೆ ಹಾಗೂ ಗಝುಲ್‌ಗಳನ್ನು ಹಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

1979ರಲ್ಲಿ ಶಾಹಿದ್‌ರ ಜೂನಿಯರ್ ತಂಡದ ಸಹ ಆಟಗಾರ ಮೀರ್ ರಂಜನ್ ನೇಗಿ.

‘‘ ನಾನು ಶಾಹಿದ್‌ರ ದೊಡ್ಡ ಅಭಿಮಾನಿಯಾಗಿದ್ದೆ. ಶಾಹಿದ್‌ಬಾ ಆಟವನ್ನು ನೋಡಲು ರಾತ್ರಿಯಿಡೀ ಕಾಯುತ್ತಿದ್ದೆ’

ಸೌರವ್ ಗಂಗುಲಿ, ಭಾರತದ ಮಾಜಿ ನಾಯಕ.

ನಾವು ವಿಶ್ವ ಹಾಕಿಯ ದಂತಕತೆಯೊಬ್ಬರನ್ನು ಕಳೆದುಕೊಂಡಿದ್ದೇವೆ. ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ

ವೀರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ.

‘‘ಮುಹಮ್ಮದ್ ಶಾಹಿದ್ ನಿಧನ ಅಕಾಲಿಕ ಹಾಗೂ ದುರದೃಷ್ಟಕರ. ಹಾಕಿಯ ಮೇಲೆ ಅಪಾರ ಪ್ರೀತಿಯಿಟ್ಟುಕೊಂಡಿದ್ದ ಶಾಹಿದ್‌ರ ನಿಧನದಿಂದ ಪ್ರಭಾವಂತ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ’’

ನರೇಂದ್ರ ಮೋದಿ, ಪ್ರಧಾನಮಂತ್ರಿ.

ಮುಹಮ್ಮದ್ ಶಾಹಿದ್ ವೈಯಕ್ತಿಕ ಮಾಹಿತಿ

ಜನನ: 14 ಎಪ್ರಿಲ್,1960, ವಾರಣಾಸಿ, ಉತ್ತರಪ್ರದೇಶ

ಮರಣ: ಜುಲೈ 20, 2016(ವಯಸ್ಸು 56) ಗುರ್ಗಾಂವ್, ಹರ್ಯಾಣ

1979: ಫ್ರಾನ್ಸ್‌ನಲ್ಲಿ ನಡೆದ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತದ ಜೂನಿಯರ್ ತಂಡದಲ್ಲಿ ಸ್ಥಾನ. ಅದೇ ವರ್ಷ ಕೌಲಾಲಂಪುರದಲ್ಲಿ ವಾಸುದೇವನ್ ಭಾಸ್ಕರನ್ ನೇತೃತ್ವದ ಭಾರತದ ಹಿರಿಯರ ಹಾಕಿ ತಂಡದಲ್ಲಿ ಮೊದಲ ಅವಕಾಶ.

ಶಾಹಿದ್ ಸಾಧನೆ

*1980ರ ಮಾಸ್ಕೊ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಚಿನ್ನದ ಪದಕ

*ದಿಲ್ಲಿಯಲ್ಲಿ 1982ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ

*1986ರಲ್ಲಿ ಸಿಯೋಲ್ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚು

*ಅರ್ಜುನ ಪ್ರಶಸ್ತಿ(1980-81)

*ಪದ್ಮಶ್ರೀ ಪ್ರಶಸ್ತಿ(1986)

 *1980ರಲ್ಲಿ ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ‘ಬೆಸ್ಟ್ ಫಾರ್ವರ್ಡ್ ಆಟಗಾರ’ ಪ್ರಶಸ್ತಿ

*1985-86: ಭಾರತೀಯ ತಂಡದ ನಾಯಕ

*1986: ಏಷ್ಯನ್ ಆಲ್‌ಸ್ಟಾರ್ ತಂಡದಲ್ಲಿ ಸ್ಥಾನ

1987: ವಾರಣಾಸಿ ಇಂಡಿಯನ್ ರೈಲ್ವೇಸ್‌ನಲ್ಲಿ ಕ್ರೀಡಾಧಿಕಾರಿಯಾಗಿ ನೇಮಕ.

 ‘‘ಒಂದು ವೇಳೆ ವಿದೇಶಿ ಕೋಚ್‌ಗಳು ಉತ್ತಮರಾಗಿದ್ದರೆ ಅವರ ದೇಶದಲ್ಲೇ ಕೋಚ್ ಆಗಿರಲಿ. ನಾವು ಎಂಟು ಬಾರಿ ಒಲಿಂಪಿಕ್ ಚಾಂಪಿಯನ್‌ಗಳಾಗಿದ್ದೇವೆ. ಅದು ನಮಗೆ ಹೆಮ್ಮೆಯ ವಿಷಯ. ಆದರೆ, ಭಾರತೀಯ ಹಾಕಿ ತಂಡದ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡದಿಂದ ಯಾವುದೇ ಪದಕವನ್ನು ನಿರೀಕ್ಷಿಸಲು ಸಾಧ್ಯವಿಲ್ಲ’’

ಇತ್ತೀಚೆಗೆ ಆರಂಭವಾದ ಹಿಂದಿ ಕ್ರೀಡಾ ನಿಯತಕಾಲಿಕದಲ್ಲಿ ಬರೆದ ಅಂಕಣಬರಹದಲ್ಲಿ ಮುಹಮ್ಮದ್ ಶಾಹಿದ್ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News