ಮಾಯಾವತಿ ನಿಂದನೆ ದಯಾಶಂಕರ್‌ಗಾಗಿ ಪೊಲೀಸರ ಶೋಧ
ಲಕ್ನೊ, ಜು.21: ಉತ್ತರಪ್ರದೇಶದ ಬಿಜೆಪಿಯ ಮಾಜಿ ಉಪಾಧ್ಯಕ್ಷ ದಯಾಶಂಕರ್ ಸಿಂಗರನ್ನು ಬಂಧಿಸುವುದಕ್ಕಾಗಿ ರಾಜ್ಯದ ಪೊಲೀಸರಿಂದು ಬಲಿಯಾ ಜಿಲ್ಲೆಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದರಾದರೂ ಸಿಂಗ್ ಮನೆಯಲ್ಲಿರಲಿಲ್ಲ.
ಬಿಎಸ್ಪಿ ಅಧ್ಯಕ್ಷೆ ಮಾಯಾವತಿಯವರ ವಿರುದ್ಧ ಮಾನಹಾನಿಕರ ಟೀಕೆ ಮಾಡಿದ್ದುದಕ್ಕಾಗಿ ಪಕ್ಷವು ಸಿಂಗ್ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಆ ಬಳಿಕ ಪೊಲೀಸರು ಬಲಿಯಾ, ಅಝಂಗಡ ಹಾಗೂ ಲಕ್ನೊಗಳಲ್ಲಿ ಅವರಿಗಾಗಿ ಹುಡುಕುತ್ತಿದ್ದಾರೆ. ಸಿಂಗ್‌ರ ಬಂಧನಕ್ಕೆ ಆಗ್ರಹಿಸಿ ಬಿಎಸ್ಪಿಯ ನೂರಾರು ಕಾರ್ಯಕರ್ತರು ಲಕ್ನೊದ ಹೃದಯ ಭಾಗದಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರು ದಯಾಶಂಕರ್ ಸಿಂಗ್‌ರಿಗಾಗಿ ಶೋಧ ನಡೆಸುತ್ತಿದ್ದಾರೆ. ಪೊಲೀಸರು ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆಂದು ಆಳುವ ಸಮಾಜವಾದಿ ಪಕ್ಷದ ನಾಯಕ ಬೇನಿಪ್ರಸಾದ್ ವರ್ಮ ತಿಳಿಸಿದ್ದಾರೆ.
ಮಾಯಾವತಿಯವರನ್ನು ಲೈಂಗಿಕ ಕಾರ್ಯಕರ್ತೆಗೆ ಹೋಲಿಸಿದುದಕ್ಕಾಗಿ ಸಿಂಗ್‌ರನ್ನು ಬಿಜೆಪಿ ನಿನ್ನೆ ಸಂಜೆ ಪಕ್ಷದಿಂದ ಉಚ್ಚಾಟಿಸಿದೆ. ಅವರ ವಿರುದ್ಧ ಪರಿಶಿಷ್ಟ ಜಾತಿ-ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಆರೋಪ ಹೊರಿಸಲಾಗಿದೆ.
ಬಿಎಸ್ಪಿ ಕಾರ್ಯಕರ್ತರಿಂದು ಲಕ್ನೊದ ಹಜ್ರತ್‌ಗಂಜ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರು ಬಿಜೆಪಿ ಕಚೇರಿಯ ಬಳಿ ಗುಂಪುಗೂಡುತ್ತಿದ್ದಂತೆಯೇ ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವಪ್ರಸಾದ್ ವೌರ್ಯ, ಸಿಂಗ್‌ರ ವಿರುದ್ಧ ಪಕ್ಷವು ಕ್ರಮ ಕೈಗೊಂಡಿರುವುದರಿಂದ ವಿವಾದವನ್ನು ಇಲ್ಲಿಗೇ ಮುಕ್ತಾಯಗೊಳಿಸಬೇಕು. ಅವರು ಆಡಿದ ಮಾತು ತಪ್ಪು. ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ವಿವಾದವನ್ನು ಇಲ್ಲಿಗೆ ಕೊನೆಗೊಳಿಸಬೇಕೆಂದು ಮನವಿ ಮಾಡಿದ್ದಾರೆ.