ಹಣ ಬಳಕೆಯಾದರೆ ಮತದಾನ ರದ್ದು: ಆಯೋಗದ ಪ್ರಸ್ತಾವನೆಯ ಪರಿಶೀಲನೆ
ಹೊಸದಿಲ್ಲಿ,ಜು.21: ಮತದಾರರ ಮೇಲೆ ಪ್ರಭಾವ ಬೀರಲು ಹಣ ಬಳಕೆಯಾಗಿದೆ ಎಂಬ ಸಾಕ್ಷಾಧಾರ ಕಂಡು ಬಂದರೆ ಮತದಾನವನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ತನಗೆ ನೀಡಲು ಚುನಾವಣಾ ಕಾನೂನುಗಳಿಗೆ ತಿದ್ದುಪಡಿ ತರಬೇಕೆಂಬ ಚುನಾವಣಾ ಆಯೋಗದ ಪ್ರಸ್ತಾವನೆಯನ್ನು ಸರಕಾರವು ಪರಿಶೀಲಿಸುತ್ತಿದೆ ಎಂದು ಸಹಾಯಕ ಕಾನೂನು ಸಚಿವ ಪಿ.ಪಿ.ಚೌಧರಿ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.
ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ನಗದು ಹಣ ಮತ್ತು ಉಡುಗೊರೆಗಳನ್ನು ನೀಡುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಯೋಗವು, ಲಂಚ ನೀಡಿಕೆ ಆಧಾರದಲ್ಲಿ ಮತದಾನವನ್ನು ಮುಂದೂಡಲು ಅಥವಾ ಚುನಾವಣೆಯನ್ನು ರದ್ದುಗೊಳಿಸಲು ಅವಕಾಶ ನೀಡಲು ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ನೂತನ ಕಲಂ ‘58ಬಿ’ಅನ್ನು ಸೇರಿಸುವಂತೆ ಜೂ.6ರಂದು ಸರಕಾರವನ್ನು ಕೇಳಿಕೊಂಡಿತ್ತು.
ಪ್ರಸಕ್ತ ಮತದಾರರ ಮೇಲೆ ಪ್ರಭಾವ ಬೀರಲು ಹಣದ ಬಳಕೆಯಾಗಿದ್ದರೆ ಮತದಾನವನ್ನು ರದ್ದುಗೊಳಿಸಲು ಅಥವಾ ಮುಂದೂಡಲು ಸಂವಿಧಾನದ 324ನೇ ವಿಧಿಯಡಿ ಆಯೋಗವು ಅಧಿಕಾರವನ್ನು ಹೊಂದಿದೆ.