ರಿಯೋ ಒಲಿಂಪಿಕ್ಸ್: ನಿಷೇಧ ವಿರುದ್ಧ ರಶ್ಯ ಅಥ್ಲೀಟ್‌ಗಳ ಮೇಲ್ಮನವಿ ತಿರಸ್ಕರಿಸಿದ ಸಿಎಎಸ್
ಲಾಸನ್, ಜು.21: ಡೋಪಿಂಗ್ ಆರೋಪದಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸದಂತೆ ತಮ್ಮ ಮೇಲೆ ಐಎಎಎಫ್ ವಿಧಿಸಿದ್ದ ನಿಷೇಧಕ್ಕೆ ತಡೆ ನೀಡಬೇಕೆಂದು ರಶ್ಯದ 67 ಅಥ್ಲೀಟ್‌ಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಧೀಕರಣ ಗುರುವಾರ ತಿರಸ್ಕರಿಸಿದೆ.
ರಶ್ಯದಲ್ಲಿ ಸರಕಾರವೇ ಉದ್ದೀಪನಾ ಮದ್ದು ಸೇವನೆಗೆ ಉತ್ತೇಜನ ನೀಡುತ್ತಿದೆ ಎಂಬ ಆರೋಪದ ಮೇಲೆ ರಶ್ಯದ ಅಥ್ಲೀಟ್‌ಗಳನ್ನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸದಂತೆ ಅಂತಾರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್) ವಿಧಿಸಿರುವ ನಿಷೇಕ್ಕೆ ತಡೆಹೇರಬೇಕೆಂದು ರಶ್ಯದ ಒಲಿಂಪಿಕ್ ಕಮಿಟಿ ಹಾಗೂ 67 ಅಥ್ಲೀಟ್‌ಗಳು ಸಲ್ಲಿಸಿರುವ ಮೇಲ್ಮನವಿಯನ್ನು ತಿರಸ್ಕರಿಸುತ್ತಿರುವುದಾಗಿ ಕ್ರೀಡಾ ನ್ಯಾಯ ಪಂಚಾಯತಿ(ಸಿಎಎಸ್) ಹೇಳಿದೆ.
ಒಲಿಂಪಿಕ್ಸ್‌ನಿಂದ ನಿಷೇಧ ಎದುರಿಸುತ್ತಿರುವ ರಶ್ಯದ 67 ಅಥ್ಲೀಟ್‌ಗಳ ಪೈಕಿ ಎರಡು ಬಾರಿಯ ಪೋಲ್‌ವೋಲ್ಟ್ ಚಾಂಪಿಯನ್ ಯೆಲೆನಾ ಇಸಿನ್‌ಬಾಯೆವಾ ಅವರಿದ್ದಾರೆ.
ರಶ್ಯದಲ್ಲಿ ಸರಕಾರದ ಪ್ರಾಯೋಜಕತ್ವದಲ್ಲಿ ವ್ಯಾಪಕ ಡೋಪಿಂಗ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದ ಬಳಿಕ ಕಳೆದ ವರ್ಷ ತನಿಖೆ ನಡೆಸಲಾಗಿತ್ತು. ತನಿಖೆಯ ವರದಿಯನ್ನು ಆಧರಿಸಿ ಐಎಎಎಫ್ ರಶ್ಯದ ಅಥ್ಲೀಟ್‌ಗಳನ್ನು ಆಗಸ್ಟ್ 5 ರಿಂದ ಆರಂಭವಾಗಲಿರುವ ರಿಯೋ ಗೇಮ್ಸ್ ಸಹಿತ ಎಲ್ಲ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿತ್ತು.
ಐಎಎಎಫ್ ಸಿಎಎಸ್ ನ್ಯಾಯಾಧೀಕರಣದ ತೀರ್ಪನ್ನು ಸ್ವಾಗತಿಸಿದೆ.
ಇಂದಿನ ತೀರ್ಪು ಅಥ್ಲೀಟ್‌ಗಳಿಗೆ ಮುಕ್ತವಾಗಿ ಆಡಲು ಅವಕಾಶ ನೀಡಿದಂತಾಗಿದೆ. ಸ್ವಚ್ಛ ಅಥ್ಲೀಟ್‌ಗಳನ್ನು ರಕ್ಷಿಸಲು ನಾವು ಪ್ರಯೋಗಿಸುತ್ತಿರುವ ನಿಯಮದ ಹಕ್ಕನ್ನು ಸಿಎಎಸ್ ಎತ್ತಿ ಹಿಡಿದಿದೆ ಎಂದು ಐಎಎಎಫ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ರಶ್ಯದ ಸರಕಾರವೇ ಉದ್ದೀಪನಾ ಮದ್ದು ಸೇವನೆಗೆ ಉತ್ತೇಜನ ನೀಡುತ್ತಿದೆ ಎಂದು ವಾಡಾದ ಸ್ವತಂತ್ರ ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು. ವಾಡಾದ ವರದಿಯನ್ನು ಅಮೆರಿಕ ಹಾಗೂ ಇತರ ದೇಶಗಳು ಬೆಂಬಲಿಸಿದ್ದು, ರಶ್ಯವನ್ನು ರಿಯೋ ಗೇಮ್ಸ್‌ನಿಂದ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದವು.
ಕ್ರೀಡಾ ನ್ಯಾಯ ಪಂಚಾಯತಿ(ಸಿಎಎಸ್)ಯ ತೀರ್ಪನ್ನು ಅಭ್ಯಸಿಸಿದ ಬಳಿಕ ಮುಂದಿನ ವಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಬುಧವಾರ ಸ್ಪಷ್ಟಪಡಿಸಿತ್ತು.
ರಶ್ಯ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅಮೆರಿಕ ಬಳಿಕ ಎರಡನೆ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿತ್ತು. ಲಂಡನ್ ಗೇಮ್ಸ್‌ನಲ್ಲಿ 7 ಚಿನ್ನ, ನಾಲ್ಕು ಬೆಳ್ಳಿ ಹಾಗೂ ಐದು ಕಂಚಿನ ಪದಕವನ್ನು ಜಯಿಸಿತ್ತು.