ಸ್ಪಿನ್ ಸಮಸ್ಯೆ ನಿವಾರಿಸಲು ಸಕ್ಲೇನ್ ಮುಶ್ತಾಕ್‌ಗೆ ಇಂಗ್ಲೆಂಡ್ ಮೊರೆ
ಮ್ಯಾಂಚೆಸ್ಟರ್, ಜು.21: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಯಾಸಿರ್ ಷಾ ದಾಳಿಗೆ ಸಿಲುಕಿ 75 ರನ್‌ಗಳ ಅಂತರದಿಂದ ಸೋತಿರುವ ಇಂಗ್ಲೆಂಡ್ ಶುಕ್ರವಾರ ಓಲ್ಡ್ ಟ್ರಾಫೋರ್ಡ್‌ನಲ್ಲಿ ಆರಂಭವಾಗಲಿರುವ ಎರಡನೆ ಟೆಸ್ಟ್‌ನಲ್ಲಿ ಜಯ ಸಾಧಿಸಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಎದುರು ನೋಡುತ್ತಿದೆ.
ಓಲ್ಡ್ ಟ್ರಾಫೋರ್ಡ್ ಪಿಚ್ ಕೂಡ ಸ್ಪಿನ್ ಸ್ನೇಹಿಯಾಗಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್ ಉರುಳಿಸಿದ್ದ ಯಾಸಿರ್ ಆಂಗ್ಲರಿಗೆ ಮತ್ತೊಮ್ಮೆ ಕಂಟಕವಾಗಬಹುದು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡ ಸ್ಪಿನ್ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಬಯಸಿದೆ. ಪಾಕಿಸ್ತಾನದ ಮಾಜಿ ಆಫ್-ಸ್ಪಿನ್ನರ್ ಸಕ್ಲೇನ್ ಮುಶ್ತಾಕ್‌ರನ್ನು ತಂಡದ ಕೋಚಿಂಗ್ ಸಲಹೆಗಾರನಾಗಿ ನೇಮಕಗೊಳಿಸಲು ನಿರ್ಧರಿಸಿದೆ.
ಎರಡನೆ ಟೆಸ್ಟ್‌ನಲ್ಲಿ ಲೆಗ್-ಸ್ಪಿನ್ನರ್ ಆದಿಲ್ ರಶೀದ್ ತನ್ನ ತವರು ಮೈದಾನದಲ್ಲಿ ಚೊಚ್ಚಲ ಪಂದ್ಯ ಆಡುವ ಸಾಧ್ಯತೆಯಿದೆ. ಇಂಗ್ಲೆಂಡ್ ತಂಡದ ಆಫ್-ಸ್ಪಿನ್ನರ್ ಮೊಯಿನ್ ಅಲಿ ಹಾಗೂ ರಶೀದ್ ಅವರು ಮುಶ್ತಾಕ್ ಪ್ರವೇಶದಿಂದಾಗಿ ಉತ್ತಮ ಸಲಹೆ ಪಡೆಯುವ ನಿರೀಕ್ಷೆಯಿದೆ.
2014ರಲ್ಲಿ ಪಾಕ್‌ನ ಮಾಜಿ ಲೆಗ್ ಸ್ಪಿನ್ನರ್ ಮುಶ್ತಾಕ್ ಅಹ್ಮದ್ ಸ್ವದೇಶಕ್ಕೆ ವಾಪಸಾದ ಬಳಿಕ ಇಂಗ್ಲೆಂಡ್‌ನ ಸ್ಪೆಷಲಿಸ್ಟ್ ಸ್ಪಿನ್ ಕೋಚ್ ಹುದ್ದೆ ತೆರವಾಗಿತ್ತು. ಅಹ್ಮದ್ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕ್ ತಂಡದ ಸ್ಪಿನ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂಗ್ಲೆಂಡ್ ತಂಡ ಎರಡನೆ ಟೆಸ್ಟ್‌ಗೆ 14 ಸದಸ್ಯರನ್ನು ಆಯ್ಕೆ ಮಾಡಿದ್ದು, ಮೊದಲ ಟೆಸ್ಟ್‌ನಲ್ಲಿ ಆಡುವುದರಿಂದ ವಂಚಿತರಾಗಿದ್ದ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹಾಗೂ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತಂಡಕ್ಕೆ ವಾಪಸಾಗುತ್ತಿದ್ದಾರೆ. ಈ ಇಬ್ಬರು ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇಂಗ್ಲೆಂಡ್ ಇಬ್ಬರು ಸ್ಪಿನ್ನರ್‌ಗೆ ಆದ್ಯತೆ ನೀಡಲಿದೆ.
ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ 74ಕ್ಕೆ 4 ವಿಕೆಟ್ ಕಬಳಿಸಿದ್ದ ಸ್ಟೋಕ್ಸ್ ಅವರು ಸಕ್ಲೇನ್‌ರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ.