ಫರೀದಾಬಾದ್‌ನ ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿವೆ 10 ರೂ. ನಾಣ್ಯಗಳು
ಫರೀದಾಬಾದ್, ಜು.22: ಫರೀದಾಬಾದ್ ನಗರದ ಜನರು ಕಳೆದೆರಡು ವಾರಗಳಿಂದ ಗೊಂದಲಕ್ಕೀಡಾಗಿದ್ದಾರೆ. ಹತ್ತು ರೂಪಾಯಿ ನಾಣ್ಯ ಚಲಾವಣೆಯಲ್ಲಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯೇ ಅವರ ಗೊಂದಲಕ್ಕೆ ಕಾರಣವಾಗಿದೆ.
ನಗರದ ಕೆಲವು ಅಂಗಡಿ ಮಾಲಕರು ಈ ಹತ್ತು ರೂಪಾಯಿ ನಾಣ್ಯವನ್ನು ಗ್ರಾಹಕರಿಂದ ಸ್ವೀಕರಿಸುತ್ತಾರಾದರೂ, ಹಲವರು ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಈ ನಾಣ್ಯವನ್ನು ರಿಸರ್ವ್ ಬ್ಯಾಂಕ್ ಅಮಾನ್ಯಗೊಳಿಸಿದೆಯೆಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವುದೇ ಇದಕ್ಕೆ ಕಾರಣ.
ಈ ವದಂತಿ ಸುಳ್ಳು. ರಿಸರ್ವ್ ಬ್ಯಾಂಕ್ ಇಂತಹ ಯಾವುದೇ ನಿಯಮಾವಳಿ ತಂದಿಲ್ಲ. ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುವವರ ವಿರುದ್ಧ ಐಪಿಸಿಯ ಸೆಕ್ಷನ್ 498ಎ ಹಾಗೂ 489ಇ ಅನ್ವಯ ಪ್ರಕರಣ ದಾಖಲಿಸಬಹುದು ಎಂದು ಎಸ್‌ಬಿಐನ ನೀಲಂ ಚೌಕ್ ಶಾಖೆಯ ಸಹಾಯಕ ಪ್ರಬಂಧಕ ಎ.ಕೆ. ಅಹುಜಾ ಹೇಳುತ್ತಾರೆ.
ನಮಗೆ ಆಗಾಗ ಹತ್ತು ರೂಪಾಯಿ ಮೌಲ್ಯದ 2,000 ನಾಣ್ಯಗಳಿರುವ 50 ಚೀಲಗಳು ರಿಸರ್ವ್ ಬ್ಯಾಂಕಿನಿಂದ ದೊರೆಯುತ್ತವೆ. ಈ ನಾಣ್ಯವನ್ನು ಅಮಾನ್ಯ ಮಾಡಲಾಗಿಲ್ಲವೆಂಬುದು ಇದರಿಂದ ತಿಳಿಯುತ್ತದೆ ಎಂದು ಹೇಳುತ್ತಾರವರು.
ಸಣ್ಣ ಅಂಗಡಿಗಳ ಮಾಲಕರು ಮಾತ್ರವಲ್ಲ ದೊಡ್ಡ ದೊಡ್ಡ ಮಳಿಗೆಗಳವರೂ ಹತ್ತು ರೂಪಾಯಿ ಮೌಲ್ಯದ ನಾಣ್ಯಗಳನ್ನು ಗ್ರಾಹಕರಿಂದ ಸ್ವೀಕರಿಸಲು ನಿರಾಕರಿಸುತ್ತಾರೆ. ಈ ನಾಣ್ಯ ನೀಡಿದ ಗ್ರಾಹಕನಿಗೆ ಯಾವ ವಸ್ತುವನ್ನೂ ಮಾರಲು ಅವರು ಇಚ್ಛಿಸುವುದಿಲ್ಲ ಎಂದು ನಗರದ ಓರ್ವ ನಿವಾಸಿ ಹೇಳುತ್ತಾರೆ.
ಜನರು ಈಗ ಬ್ಯಾಂಕ್ ಶಾಖೆಗಳ ಹೊರಗೆ ಸರತಿ ನಿಂತು ಈ ಹತ್ತು ರೂಪಾಯಿ ಮೌಲ್ಯದ ನಾಣ್ಯಗಳನ್ನು ಹಿಂದಕ್ಕೆ ನೀಡಿ ನೋಟುಗಳನ್ನು ಪಡೆಯಲು ಹವಣಿಸುತ್ತಿದ್ದಾರಾದರೂ ಈ ನಾಣ್ಯಗಳು ಚಲಾವಣೆಯಲ್ಲಿರುವುದರಿಂದ ಅವುಗಳನ್ನು ನೋಟುಗಳಿಗೆ ವಿನಿಮಯ ಮಾಡಿ ಕೊಡಲಾಗುವುದಿಲ್ಲ ಎಂದು ನಾವು ಅವರಿಗೆ ಹೇಳುತ್ತೇವೆ ಎಂದು ಬ್ಯಾಂಕ್ ಉದ್ಯೋಗಿಯೊಬ್ಬರು ವಿವರಿಸುತ್ತಾರೆ.
ಈ ಗೊಂದಲದ ಬಗ್ಗೆ ರಿಸರ್ವ್ ಬ್ಯಾಂಕಿಗೆ ಪತ್ರ ಬರೆಯುವುದಾಗಿ ಎಸ್‌ಬಿಐನ ಸಹಾಯಕ ಪ್ರಬಂಧಕ ಅಹುಜಾ ಹೇಳುತ್ತಾರೆ. ಜನರಿಗೆ ಈ ಬಗ್ಗೆ ಬ್ಯಾಂಕ್ ಉದ್ಯೋಗಿಗಳು ಅರಿವನ್ನುಂಟು ಮಾಡಲೂ ಪ್ರಯತ್ನಿಸಲಿದ್ದಾರೆ ಎಂದು ಅವರು ತಿಳಿಸಿದರು.