×
Ad

ಆಪ್ ಸಂಸದ ಮಾನ್ ವಿರುದ್ಧ ಕಠಿಣ ಕ್ರಮ ಸಾಧ್ಯತೆ

Update: 2016-07-23 08:57 IST

ಹೊಸದಿಲ್ಲಿ, ಜು.23: ಫೇಸ್‌ಬುಕ್‌ನಲ್ಲಿ ಲೋಕಸಭೆ ಒಳಾಂಗಣದ ವೀಡಿಯೊ ಪೋಸ್ಟ್ ಮಾಡಿದ್ದಕ್ಕೆ ಆಪ್ ಸಂಸದ ಭಗವಂತ್ ಮಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಈ ಸಂಬಂಧ ಮಾನ್ ಕೇಳಿದ ಕ್ಷಮೆಯನ್ನು ತಿರಸ್ಕರಿಸಿದ್ದಾರೆ. ಉಭಯ ಸದನಗಳ ಸದಸ್ಯರು, ಮಾನ್ ಸದಸ್ಯತ್ವ ರದ್ದುಪಡಿಸುವಂತೆ ಅಗ್ರಹಿಸಿದರು.

ಮಾನ್ ಕ್ರಮದಿಂದ ಸಂಸತ್ತಿನ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗಿದೆ. ಲೋಕಸಭೆಯ ಒಳಾಂಗಣ ವಿನ್ಯಾಸದ ಪಕ್ಷಿನೋಟವನ್ನು ನೀಡಿರುವುದರಿಂದ ಯಾರು ಬೇಕಾದರೂ, ಇಲ್ಲಿ ಭೀತಿ ಹುಟ್ಟಿಸಬಹುದು ಎಂದು ದಿಲ್ಲಿಯ ಮಾಜಿ ಪೊಲೀಸ್ ಅಧಿಕಾರಿ ಅಶೋಕ್ ಚಂದ್ ಹೇಳಿದ್ದಾರೆ. ಚಂದ್ ಅವರು, 2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲಿನ ಉಗ್ರ ದಾಳಿಯ ತನಿಖಾ ತಂಡದಲ್ಲಿ ಇದ್ದವರು.

ಸಂಸತ್ತಿನಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸುವ ಸಲುವಾಗಿ ನಾನು ಬರುತ್ತಿದ್ದೆ. ಶೂನ್ಯವೇಳೆಯ ನೋಟಿಸ್‌ಗಳ ಆಯ್ಕೆ ಪ್ರಕ್ರಿಯೆಯನ್ನು ತೋರಿಸುವುದು ನನ್ನ ಉದ್ದೇಶವಾಗಿತ್ತು. ನಾನು ಬೇಷರತ್ ಕ್ಷಮೆ ಯಾಚಿಸಿದ್ದೇನೆ. ಮತ್ತೆಂದೂ ಅದನ್ನು ಮಾಡುವುದಿಲ್ಲ ಎಂದು ಸಂಗ್ರೂರ್ ಕ್ಷೇತ್ರದ ಸಂಸದ, ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಆದರೆ ಇದು ಕ್ಷಮೆಗೆ ಅರ್ಹವಾದ ಕೃತ್ಯವಲ್ಲ ಎಂದು ಸುಮಿತ್ರಾ ಮಹಾಜನ್ ಹೇಳಿದ್ದಾರೆ. ಖಂಡಿತಾ ನಾವು ಕ್ರಮ ಕೈಗೊಳ್ಳುತ್ತೇವೆ. ಏಕೆಂದರೆ ಹಿಂದೆ ಸಂಸತ್ ಭವನದ ಮೇಲೆ ದಾಳಿ ನಡೆದಾಗ 13 ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಜನ್ ಹೇಳಿದರು. ಈ ಬಗ್ಗೆ ಲೋಕಸಭೆಯ ಹಿರಿಯ ಸದಸ್ಯರ ಜತೆ ಚರ್ಚಿಸಿದ್ದು, ಮಾನ್ ವಿರುದ್ಧದ ಕ್ರಮಕ್ಕೆ ಶಿಫಾರಸು ಮಾಡಲು ಸಮಿತಿ ರಚಿಸುವ ಸುಳಿವು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News