×
Ad

28 ವರ್ಷಗಳ ಬಳಿಕ ಹೆತ್ತ ತಾಯಿಯನ್ನು ಭೇಟಿಯಾದ ದುಬೈ ಸಹೋದರಿಯರು

Update: 2016-07-23 12:19 IST

ಹೈದರಾಬಾದ್, ಜು.23: ದುಬೈ ಮೂಲದ ಇಬ್ಬರು ಸಹೋದರಿಯರು ತಮ್ಮ ಭಾರತೀಯ ತಾಯಿಯನ್ನು 28 ವರ್ಷಗಳ ನಂತರ ಭೇಟಿಯಾದ ಭಾವನಾತ್ಮಕ ಕ್ಷಣಕ್ಕೆಹೈದರಾಬಾದ್ ದಕ್ಷಿಣ ಡಿಸಿಪಿ ವಿ.ಸತ್ಯನಾರಾಯಣ ಅವರ ಕಚೇರಿ ಇತ್ತೀಚೆಗೆ ಸಾಕ್ಷಿಯಾಯಿತು.

ಆಯೇಷಾ ಹಾಗೂ ಫಾತಿಮಾ ರಶೀದ್ ಎಂಬ ಸಹೋದರಿಯರು ದುಬೈ ನಿವಾಸಿಗಳಾಗಿದ್ದು, ಚಿಕ್ಕಂದಿನಿಂದಲೇ ತಮ್ಮ ಹೆತ್ತ ತಾಯಿಯಿಂದ ಬೇರ್ಪಟ್ಟಿದ್ದರು. ಆರು ತಿಂಗಳುಗಳ ಹಿಂದೆೆ ಅವರು ತಮ್ಮ ತಾಯಿಯನ್ನು ಕಾಣುವ ಉದ್ದೇಶದಿಂದ ಹೈದರಾಬಾದ್ ನಗರಕ್ಕೆ ಆಗಮಿಸಿ ಡಿಸಿಪಿಯವರ ಸಹಾಯ ಕೋರಿ ನಂತರ ಮತ್ತೆ ದುಬೈಗೆ ಮರಳಿದ್ದರು. ಇತ್ತ ಡಿಸಿಪಿ ನಿರ್ದೇಶನದಂತೆ ಅವರ ತಾಯಿಯನ್ನು ಹುಡುಕುವ ಯತ್ನ ಮುಂದುವರಿಸಿದ ಪೊಲೀಸರು ಬರೋಬ್ಬರಿ ಆರು ತಿಂಗಳುಗಳ ನಂತರ ಸಹೋದರಿಯರ ತಾಯಿ ನಝಿಯಾ ಬೇಗಮ್‌ರನ್ನು ಪತ್ತೆ ಹಚ್ಚಿದ್ದರು.

ಪೊಲೀಸರು ನೀಡಿದ ಮಾಹಿತಿಯಂತೆ ಭಾರತಕ್ಕೆ ಧಾವಿಸಿ ಬಂದ ಸಹೋದರಿಯರು ತಮ್ಮ ಹೆತ್ತ ತಾಯಿಯನ್ನು 28 ವರ್ಷಗಳ ನಂತರ ನೋಡಿ ಗದ್ಗದಿತರಾಗಿ ಭಾವಾವೇಶದಿಂದ ತಾಯಿಯನ್ನು ಮನಸಾರೆ ಬಿಗಿದಪ್ಪಿದರು. ತನಗೆ ತನ್ನ ಈ ಇಬ್ಬರು ಪುತ್ರಿಯರ ಬಗ್ಗೆ ಹೆಚ್ಚು ನೆನಪು ಇಲ್ಲವಾಗಿದ್ದರೂ, ಅವರಲ್ಲಿ ಒಬ್ಬರಿಗೆ ಒಂದು ಕೈಯ್ಯಲ್ಲಿ ಆರು ಬೆರಳುಗಳಿದ್ದುದು ಮಾತ್ರ ನೆನಪಿದೆ ಎಂದು ಆಕೆ ಹೇಳಿದಳು.

ಸಹೋದರಿಯರಲ್ಲಿ ಹಿರಿಯಳಾದ ಆಯೇಷಾ ಹೇಳುವಂತೆ ಅವರ ಹೆತ್ತವರು 1981 ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು. ಅವರ ತಾಯಿ ನಝಿಯ ಸ್ವಲ್ಪ ವರ್ಷಗಳ ಕಾಲ ದುಬೈಯಲ್ಲಿ ಪತಿಯೊಂದಿಗಿದ್ದಾಗ ಅಲ್ಲಿ ಅವರಿಬ್ಬರು ಜನಿಸಿದ್ದರು. ಈ ನಡುವೆ ನಝಿಯಾಳನ್ನು ಆಕೆಯ ಗಂಡ ವಿಚ್ಛೇದನ ನೀಡಿ ಭಾರತಕ್ಕೆ ಕಳುಹಿಸಿದ್ದರೆ ಮಕ್ಕಳನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ.

 ಇತ್ತ ಹೈದರಾಬಾದ್‌ಗೆ ಬಂದ ನಝಿಯಾಳಿಗೆ ಆಕೆಯ ಕುಟುಂಬ ಬೀದರ್‌ನ ಹಣ್ಣು ವ್ಯಾಪಾರಿಯೋರ್ವರೊಂದಿಗೆ ವಿವಾಹ ಮಾಡಿಕೊಟ್ಟಿತ್ತು. ಈ ಮದುವೆಯಿಂದ ನಝಿಯಾಳಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯಿದ್ದಾಳೆ.

ಎರಡು ದಶಕಗಳಿಗೂ ಅಧಿಕ ಸಮಯದ ಬಳಿಕ ತಮ್ಮ ತಾಯಿಯನ್ನು ನೋಡಿದ ಇಬ್ಬರು ಪುತ್ರಿಯರೂ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಲು ಹಾಗೂ ಆಕೆಯನ್ನು ದುಬೈಗೆ ಕರೆದುಕೊಂಡು ಹೋಗಲು ಬಯಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News