ಶೀಘ್ರವೇ ಆರೋಗ್ಯ ಮೂಲಭೂತ ಹಕ್ಕು

Update: 2016-07-25 03:23 GMT

ಹೊಸದಿಲ್ಲಿ, ಜು.25: ಶಿಕ್ಷಣದಂತೆ ಶೀಘ್ರವೇ ದೇಶದಲ್ಲಿ ಆರೋಗ್ಯ ಕೂಡಾ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಆಗಲಿದೆ. ಆರೋಗ್ಯ ಸಚಿವಾಲಯ ಸಿದ್ಧಪಡಿಸಿರುವ ಕರಡು ರಾಷ್ಟ್ರೀಯ ಆರೋಗ್ಯ ನೀತಿ ಅಂಗೀಕಾರವಾದರೆ ಭಾರತದಲ್ಲಿ ಆರೋಗ್ಯ ಕೂಡಾ ಮೂಲಭೂತ ಹಕ್ಕಾಗಲಿದೆ. ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಕರಡು ಮಸೂದೆಯನ್ನು ಮುಂದಿನ ತಿಂಗಳು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಸಂಪುಟ ಟಿಪ್ಪಣಿಯನ್ನು ಈಗಾಗಲೇ ವಿತರಿಸಲಾಗಿದೆ. ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ಇದನ್ನು ಸಂಪುಟದ ಮುಂದೆ ತರಲಾಗುವುದು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಸಂಬಂಧಪಟ್ಟ ಎಲ್ಲರ ಜತೆ ಸಚಿವಾಲಯ ಹಲವು ಸುತ್ತುಗಳ ಮಾತುಕತೆ ನಡೆಸಿದ್ದು, ಪ್ರಸ್ತಾವದ ಬಗ್ಗೆ ಒಮ್ಮತ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಇತರ ಹಲವು ಪ್ರಸ್ತಾವನೆಗಳ ಜತೆಗೆ, ರಾಷ್ಟ್ರೀಯ ಆರೋಗ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಕರಡು ನೀತಿ ಪ್ರಸ್ತಾವ ಮುಂದಿಟ್ಟಿದೆ. ಇದರ ಅನ್ವಯ ಆರೋಗ್ಯ ಚಿಕಿತ್ಸೆಯನ್ನು ನಿರಾಕರಿಸುವುದು ಅಪರಾಧವಾಗಲಿದೆ. ಕೇಂದ್ರ ಸರಕಾರ ರಾಜ್ಯಗಳ ಜತೆ ಸಮನ್ವಯದಿಂದ, ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಮಸೂದೆಯಡಿ ಇರುವ ಅಂಶಗಳನ್ನು ಬಳಸಿಕೊಂಡು ಇದನ್ನು ಮೂಲೂತ ಹಕ್ಕಾಗಿ ಪರಿವರ್ತಿಸಬೇಕು ಎಂದು ಸಲಹೆ ಮಾಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಜಿಡಿಪಿಯ ಶೇಕಡ 1.2ರಿಂದ 2.5ಕ್ಕೆ ಹೆಚ್ಚಿಸುವಂತೆಯೂ ಸಲಹೆ ಮಾಡಲಾಗಿದೆ.

ಸಾರ್ವತ್ರಿಕ ಆರೋಗ್ಯ ಸುರಕೆ ಮೂಲಕ ಹೆರಿಗೆ ಸಾವು ಹಾಗೂ ನವಜಾತ ಶಿಶು ಸಾವನ್ನು ನಿಯಂತ್ರಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಅಗತ್ಯ ಔಷಧ ಹಾಗೂ ರೋಗ ತಪಾಸಣಾ ಸೇವೆ ಸಿಗಬೇಕು ಎಂದು ಕರಡು ನೀತಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News