ಇನ್ನು ಮಕ್ಕಳಿಗೆ ಹೊಡೆದರೆ ಶಾಲೆ ಶಿಕ್ಷಕರು ಪರಿಹಾರ ನೀಡಬೇಕು

Update: 2016-07-25 03:40 GMT

ಹೊಸದಿಲ್ಲಿ, ಜು.25: ಇನ್ನು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಹೊಡೆದರೆ ದಂಡ ತೆರಬೇಕಾಗುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನೀಡಿದರೆ, ಶಿಕ್ಷಕರು ಪರಿಹಾರ ನೀಡಬೇಕಾಗತ್ತದೆ ಎಂದು ಕೇಂದ್ರ ಮಾಹಿತಿ ಆಯೋಗ ಮಹತ್ವದ ಆದೇಶ ನೀಡಿದೆ.

ಈ ಸಂಬಂದ ಕೇಂದ್ರೀಯ ವಿದ್ಯಾಲಯ ಸಂಘಟನೆ, ದೈಹಿಕ ಶಿಕ್ಷೆ, ಇಂಥ ಪ್ರಕರಣಗಳ ವಿವರಗಳು, ನೀಡಬೇಕಾದ ಪರಿಹಾರ, ನೀಡಿದ ಪರಿಹಾರದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಯೋಗ ಸೂಚಿಸಿದೆ. ಪ್ರತಿ ಶೈಕ್ಷಣಿಕ ವರ್ಷ ಆರಂಭವಾದ ಮೂರು ತಿಂಗಳ ಒಳಗಾಗಿ ಈ ವಿವರಗಳನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ. ದೇಶಾದ್ಯಂತ ಇರುವ 1,099 ಕೇಂದ್ರೀಯ ವಿದ್ಯಾಲಯಗಳಲ್ಲಿ ಇದು ಈ ವರ್ಷದಿಂದಲೇ ಜಾರಿಗೆ ಬರಲಿದೆ.

ಅಂತೆಯೇ ಸಿಬಿಎಸ್‌ಇ ಹಾಗೂ ಐಸಿಎಸ್‌ಸಿಯಂಥ ಮಂಡಳಿಗಳು ಇಂಥ ದೈಹಿಕ ಶಿಕ್ಷೆ ಪ್ರಕರಣಗಳನ್ನು ಸ್ವಯಂಪ್ರೇರಿತರಾಗಿ ದಾಖಲಿಸಿಕೊಂಡು, ಇದರ ತನಿಖೆಗೆ ಬಹುಪಕ್ಷೀಯ ಸಮಿತಿಯನ್ನು ರಚಿಸುವಂತೆಯೂ ಆಯೋಗ ಸೂಚನೆ ನೀಡಿದೆ. ಮಾಹಿತಿ ಆಯುಕ್ತ ಎಂ.ಶ್ರೀಧರ ಆಚಾರ್ಯಲು ಈ ಸೂಚನೆ ನೀಡಿದ್ದು, ಬ್ರಹ್ಮಾನಂದ ಮಿಶ್ರ ಎಂಬುವವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಈ ತೀರ್ಪು ನೀಡಿದ್ದಾರೆ.

ಫಿಲಿಬಿಟ್‌ನಲ್ಲಿ ಕೇಂದ್ರೀಯ ವಿದ್ಯಾಲಯದ ಶಿಕ್ಷಕ ಯಜ್ಞ ದತ್ ಆರ್ಯ ಎಂಬುವವರು ವಿದ್ಯಾರ್ಥಿಗೆ ನೀಡಿದ ದೈಹಿಕ ಶಿಕ್ಷೆ ಸಂಬಂಧ ಮಿಶ್ರಾ ಅರ್ಜಿ ಸಲ್ಲಿಸಿದ್ದರು.
ಮೂರನೆ ವ್ಯಕ್ತಿ ಈ ಮಾಹಿತಿಯನ್ನು ಕೋರಿದ ಹಿನ್ನೆಲೆಯಲ್ಲಿ ಇದರ ವಿವರಗಳನ್ನು ನೀಡಲಾಗದು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಹೇಳಿದ್ದರು. ಈ ನಿರ್ಧಾರದ ವಿರುದ್ಧ ಅವರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News