×
Ad

ಪೋಕ್‌ಮನ್ ಹುಡುಕಿಕೊಂಡು ಮುಂಬೈಗೆ ತೆರಳಲು ಮನೆಯಿಂದ ಓಡಿ ಹೋದ 9ರ ಪೋರ

Update: 2016-07-25 12:50 IST

ಕೊಲ್ಕತ್ತಾ, ಜು.25: ಯುವಜನತೆಯನ್ನು ಅಕ್ಷರಶಃ ಸೆಳೆದಿರುವ ಪೋಕ್‌ಮನ್ ಗೋ ಮೊಬೈಲ್ ಗೇಮ್ ಹಲವಾರು ಆವಾಂತರಗಳನ್ನು ಸೃಷ್ಟಿಸಿದೆಯೆಂಬುದಕ್ಕೆ ಇಲ್ಲಿದೆ ಒಂದು ಜ್ವಲಂತ ಉದಾಹರಣೆ. ಈ ಮೊಬೈಲ್ ಗೇಮ್‌ನ ಚಟ ಹತ್ತಿಸಿಕೊಂಡಿದ್ದ ಹೌರಾದ 9 ವರ್ಷದ ಬಾಲಕ ತನಗೆ ಹೆಚ್ಚು ಪೋಕ್‌ಮನ್ ಸೆರೆ ಹಿಡಿಯಲು ಮುಂಬೈ ನಗರದಲ್ಲಿ ಸಾಧ್ಯ ಎಂದು ತಿಳಿದುಕೊಂಡು ಮನೆ ಬಿಟ್ಟು ತೆರಳಿದ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.

ನಗರದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂರನೆ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ಶನಿವಾರ ಸಂಜೆ ತನ್ನ ತಾಯಿ ಬಳಿ ಹತ್ತಿರದಲ್ಲೇ ಇರುವ ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದನು. ಆದರೆ ಗಂಟೆ ಒಂಬತ್ತಾದರೂ ಆತ ಮರಳಿ ಬರದಿದ್ದಾಗ ಆಕೆ ಗಾಬರಿಗೊಂಡು ಹೌರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಬಾಲಕನಿಗಾಗಿ ಹುಡುಕಾಟ ಆರಂಭಿಸುತ್ತಿದ್ದಂತೆಯೇ ರಾತ್ರಿ 1 ಗಂಟೆಗೆ ಒಬ್ಬ ಬಾಲಕ ಹೌರಾ ರೈಲ್ವೇ ನಿಲ್ದಾಣದ ಬಳಿ ಅತ್ತಿತ್ತ ಹೋಗುತ್ತಿರುವುದು ಕಂಡು ಬಂತು. ಪೊಲೀಸರು ಆತನನ್ನು ಸಮೀಪಿಸಿ ವಿಚಾರಿಸಿದಾಗ ತನಗೆ ‘ಅಂಕಲ್’ ಒಬ್ಬರು ಹೆಚ್ಚು ಪೋಕ್‌ಮನ್‌ನ್ನು ಮುಂಬೈನಲ್ಲಿ ಹಿಡಿಯಬಹುದೆಂದು ಹೇಳಿದರೆಂದು ತಿಳಿಸಿದನು.

ಪೊಲೀಸರು ಬಾಲಕನ ತಾಯಿಗೆ ಸುದ್ದಿ ಮಟ್ಟಿಸಿದ್ದು ಆಕೆ ಬಂದು ಈತನೇ ಕಾಣೆಯಾದ ತನ್ನ ಮಗನೆಂದು ಗುರುತಿಸಿದರು. ತನ್ನ ಮಗ ಕೆಲವು ತಿಂಗಳಿನಿಂದ ಈ ಮೊಬೈಲ್ ಗೇಮ್ ಚಟಕ್ಕೆ ಒಳಗಾಗಿದ್ದನೆಂದೂ ಕೆಲ ತಿಂಗಳುಗಳ ಹಿಂದೆ ಗಂಗಾ ಘಾಟ್ ಸಮೀಪ ಹೀಗೆಯೇ ಅಲೆಯುತ್ತಿದ್ದನೆಂದೂ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News