ಧಾರವಾಡ ಸಹಿತ 6 ನೂತನ ಐಐಟಿ ಸ್ಥಾಪನೆಗೆ ಲೋಕಸಭೆ ಅಸ್ತು

Update: 2016-07-25 18:00 GMT

ಹೊಸದಿಲ್ಲಿ,ಜು.25: ಧಾರವಾಡ ಸೇರಿದಂತೆ ಆರು ಕಡೆಗಳಲ್ಲಿ ನೂತನ ಭಾರತೀಯ ತಾಂತ್ರಿಕ ವಿದ್ಯಾಲಯ (ಐಐಟಿ)ಗಳನ್ನು ಸ್ಥಾಪಿಸುವ ಮಹತ್ವದ ವಿಧೇಯಕವನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.ತಂತ್ರಜ್ಞಾನ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2016ರ ಅನ್ವಯ ನೂತನ ಐಐಟಿಗಳು ಸ್ಥಾಪನೆಯಾಗಲಿವೆ.

ಜಮ್ಮು, ತಿರುಪತಿ, ಪಾಲಕ್ಕಾಡ್, ಗೋವಾ, ಭಿಲಾಯಿಗಳಲ್ಲಿಯೂ ಐಐಟಿ ಆರಂಭಗೊಳ್ಳಲಿದೆ.ಧನಬಾದ್‌ನಲ್ಲಿರುವ ಭಾರತೀಯ ಗಣಿಗಾರಿಕೆ ವಿದ್ಯಾಲಯ ಕೂಡಾ ಈ ವಿಧೇಯಕದ ವ್ಯಾಪ್ತಿಗೆ ಬರಲಿದೆ. ಕೇಂದ್ರ ಮಾನವಸಂಪನ್ಮೂಲ ಸಚಿವ ಪ್ರಕಾಶ್ ಜಾವ್‌ಡೇಕರ್ ವಿಧೇಯಕವನ್ನು ಮಂಡಿಸಿ ಮಾತನಾಡುತ್ತಾ, ‘ಎಲ್ಲರಿಗೂ ಉತ್ತಮ ಶಿಕ್ಷಣ’ ಸರಕಾರದ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಅದು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಿದೆಯೆಂದು ತಿಳಿಸಿದರು.

ಐಐಟಿ ಹಾಗೂ ಎನ್‌ಐಟಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂಪಂಗಡ, ಬಿಪಿಎಲ್ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದೆಂದು ಅವರು ತಿಳಿಸಿದರು. ವಾರ್ಷಿಕವಾಗಿ ಶೇ.9ರಷ್ಟು ಆದಾಯವನ್ನು ಹೊಂದಿರುವ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ದೊರೆಯಲಿದೆಯೆಂದು ಜಾವಡೇಕರ್ ಸದನಕ್ಕೆ ತಿಳಿಸಿದರು.

ಐಐಟಿ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ಕೋಚಿಂಗ್ ಸಂಸ್ಥೆಗಳು ದುಬಾರಿ ಶುಲ್ಕವನ್ನು ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಐಐಟಿ-ಪಿಎಲ್ ಎಂಬ ಉಚಿತ ಆನ್‌ಲೈನ್ ಕೋಚಿಂಗ್ ಕಾರ್ಯಕ್ರಮವನ್ನು ಆರಂಭಿಸಲಿದೆಯೆಂದು ಅವರು ಹೇಳಿದರು. ವಿಸ್ತೃತ ಮಟ್ಟದಲ್ಲಿ ವಿದ್ಯಾರ್ಥಿ ಸಮುದಾಯವನ್ನು ತಲುಪುವ ಉದ್ದೇಶದಿಂದ ಭವಿಷ್ಯದಲ್ಲಿ ಟಿವಿ ವಾಹಿನಿಯ ಮೂಲಕವೂ ಕೋಚಿಂಗ್ ಕಾರ್ಯಕ್ರಮವನ್ನು ಆರಂಭಿಸಲೂ ಸರಕಾರ ಚಿಂತಿಸುತ್ತಿದೆಯೆಂದು ಜಾವಡೇಕರ್ ಸದನಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News