ವಿಡಿಯೋದಲ್ಲಿರುವ ಧ್ವನಿ ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿಯದ್ದೇ ಎಂದು ಒಪ್ಪಿಕೊಂಡ ವಕೀಲರು
ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಮತ್ತು ಅವರ ಸಹೋದ್ಯೋಗಿ ಸಮೀರ್ ಅಹ್ಲುವಾಲಿಯರನ್ನು ಪ್ರತಿನಿಧಿಸುವ ವಕೀಲರು ರೂ. 100 ಕೋಟಿ ಸುಲಿಗೆ ಪ್ರಕರಣದ ವಿಡಿಯೋದಲ್ಲಿರುವುದು ತಮ್ಮ ಕ್ಲೈಂಟ್‌ಗಳ ಧ್ವನಿಯೇ ಎಂದು ಒಪ್ಪಿಕೊಂಡಿದ್ದಾರೆ.
ನ್ಯಾಯಾಲಯದ ವಿಚಾರಣೆಗೆ ಮುನ್ನ ಸಿಬಿಐ ನ್ಯಾಯಾದೀಶ ವಿನೋದ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಝೀ ಸಂಪಾದಕರ ವಕೀಲರಾದ ವಿಜಯ್ ಅಗ್ರವಾಲ್ ಮತ್ತು ಅಮನ್ ಲೇಖಿ ವಿಡಿಯೋದಲ್ಲಿರುವುದು ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಮತ್ತು ಅವರ ಸಹೋದ್ಯೋಗಿ ಸಮೀರ್ ಅಹ್ಲುವಾಲಿಯರ ಧ್ವನಿ ಎಂದು ಹೇಳಿದ್ದಾರೆ. ಅಲ್ಲದೆ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಸಂಭಾಷಣೆಯ ಟ್ರಾನ್ಸಕ್ರಿಪ್ಟ್ ಕೊಡುತ್ತಿಲ್ಲ ಎಂದೂ ಹೇಳಿದ್ದಾರೆ.
"ಟೇಪ್‌ನಲ್ಲಿರುವ ಧ್ವನಿ ನಿಮ್ಮ ಕ್ಲೈಂಟ್‌ಗಳದ್ದೆಂದು ಒಪ್ಪಿಕೊಂಡ ಮೇಲೆ ಟ್ರಾನ್‌ಸ್ಕ್ರಿಪ್ಟ್ ಅಗತ್ಯ ಏನಿದೆ?" ಎಂದು ನ್ಯಾಯಾದೀಶರು ಕೇಳಿದ್ದಾರೆ. ಜಿಂದಾಲ್ ಸಂಸ್ಥೆ ತನಿಖಾ ಸಂಸ್ಥೆಯ ನೆರವಿನಿಂದ ಟ್ರಾನ್‌ಸ್ಕ್ರಿಪ್ಟನ್ನು ತಿರುಚುವ ಭಯವಿದೆ ಎಂದು ವಕೀಲರು ಹೇಳಿದ್ದಾರೆ. ಟೇಪನ್ನು ತಿರುಚುವ ಸಾಧ್ಯತೆ ಇದೆಯೇ ಎಂದು ತನಿಖಾ ಅಧಿಕಾರಿಯನ್ನು ನ್ಯಾಯಾಧೀಶರು ಪ್ರಶ್ನಿಸಿದಾಗ ಅವರು ಸಾಧ್ಯತೆಯಿಲ್ಲ ಎಂದಿದ್ದಾರೆ. ಈಗಾಗಲೇ ಝೀ ಸಂಪಾದಕರು ಮತ್ತು ಉದ್ಯಮಿ ನವೀನ್ ಜಿಂದಾಲ್ ನಡುವಿನ ಸಂಭಾಷಣೆಯ ಟ್ರಾನ್‌ಸ್ಕ್ರಿಪ್ಟ್ ಮತ್ತು ಧ್ವನಿ ಮಾದರಿಯನ್ನು ತನಿಖಾಧಿಕಾರಿಗಳಿಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಹೇಳಿರುವುದನ್ನು ನ್ಯಾಯಾಲಯಕ್ಕೆ ತಿಳಿಸಿದ ಮೇಲೆ ವಿಚಾರಣಾ ನ್ಯಾಯಾಲಯವು ಮೊಕದ್ದಮೆಯ ವಿಚಾರಣೆ ಮುಂದೂಡಿದೆ.
ವಕೀಲರ ಬೇಡಿಕೆ ಕೇಳಿದ ಮೇಲೆ ಸಿಬಿಐ ನ್ಯಾಯಾಲಯವು ಮೊಕದ್ದಮೆಯ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ. ಪಾಟಿಯಾಲ ಹೌಸ್ ನ್ಯಾಯಾಲಯವು ಝೀ ಸಂಪಾದಕರ ಜಾಮೀನು ರದ್ದತಿಯ ಅರ್ಜಿಯನ್ನು ಪರಿಶೀಲಿಸುತ್ತಿದೆ. ಚೌಧರಿ ಮತ್ತು ಅಹ್ಲುವಾಲಿಯರನ್ನು 2012ರಲ್ಲಿ ಜಿಂದಾಲ್ ಕಂಪೆನಿಯ ದೂರಿನ ಮೇಲೆ ಬಂಧಿಸಲಾಗಿದೆ. ಕಂಪೆನಿಯ ವಿರುದ್ಧ ಅವಹೇಳನಕಾರೀ ಸುದ್ದಿ ಪ್ರಸಾರ ಮಾಡದಿರಲು ಸಂಪಾದಕರು ರೂ. 100 ಕೋಟಿ ಬೇಡಿಕೆ ಇಟ್ಟ ಆರೋಪವಿದೆ. ಸಂಪಾದಕರು ಈಗ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಚೌಧರಿಗೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭದ್ರತೆಯನ್ನು ನೀಡಿದೆ. ಝೀ ಸಂಸ್ಥೆಯನ್ನು ಸಾಮಾನ್ಯವಾಗಿ ಕೇಸರಿ ಪಕ್ಷದ ಮುಖವಾಣಿ ಎಂದೇ ಆರೋಪಿಸಲಾಗುತ್ತಿದೆ.
ಕೃಪೆ: www.jantakareporter.com