×
Ad

ಜಿಲ್ಲಾಧಿಕಾರಿ ಆದೇಶದ ತಿರುಚಿದ ಚಿತ್ರದ ಮೂಲಕ ಕೋಮುಪ್ರಚೋದನೆಗೆ ವಿಫಲ ಯತ್ನ

Update: 2016-07-29 11:54 IST

ಇಟಾನಗರ್, ಜು.29: ‘ದಿ ಫ್ರಸ್ಟ್ರೇಟೆಡ್ ಇಂಡಿಯನ್’ ಎಂಬ ಹೆಸರಿನಲ್ಲಿ ಕಾರ್ಯಾಚರಿಸುವ ಬಲಪಂಥೀಯ ಸಂಘಟನೆಯೊಂದು ತನ್ನ ಫೇಸ್ ಬುಕ್ ಪುಟದಲ್ಲಿ ಖೋನ್ಸಾ ಜಿಲ್ಲಾಧಿಕಾರಿ ರವಿ ಝಾ ಅವರು ಸಹಿ ಹಾಕಿರುವ ಆದೇಶವೊಂದರ ‘ಫೊಟೋಶಾಪ್’ ಮಾಡಲ್ಪಟ್ಟ ಚಿತ್ರ ಪ್ರಕಟಿಸಲಾಗಿದೆ. ರಾಜ್ಯದ ಶಾಲೆಗಳಲ್ಲಿ ಪ್ರವೇಶಾತಿ ವೇಳೆ ಮಕ್ಕಳ ಬ್ಯಾಪ್ಟಿಸಂ ಪ್ರಮಾಣಪತ್ರವನ್ನು ಪ್ರಸ್ತುತಪಡಿಸಬೇಕೆಂಬ ನಿಯಮವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆಂಬ ಅರ್ಥ ಕೊಡುವ ನಕಲಿ ದಾಖಲೆಯನ್ನು ಪೋಸ್ಟ್ ಮಾಡಿರುವುದು ಪತ್ತೆಯಾಗಿದೆಯೆದು ಜನತಾ ಕಾ ರಿಪೋರ್ಟರ್ ವರದಿ ಮಾಡಿದೆ.

ಈ ಪೋಸ್ಟ್‌ನಲ್ಲಿ ಬರೆದಿರುವಂತೆ ಕ್ರೈಸ್ತರಲ್ಲದ ವಿದ್ಯಾರ್ಥಿಗಳ ವಿರುದ್ಧ ರಾಜ್ಯದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ‘‘ಅರುಣಾಚಲ ಪ್ರದೇಶದ ಶಾಲೆಗಳು ವಿದ್ಯಾರ್ಥಿಗಳಿಂದ ಬ್ಯಾಪ್ಟಿಸಂ ಪ್ರಮಾಣಪತ್ರ ಕೇಳುತ್ತಿದ್ದು, ಮಕ್ಕಳನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಉದ್ದೇಶ ಇದರ ಹಿಂದೆ ಇದೆ ಎಂದು ಫೇಸ್‌ಬುಕ್ ಪೋಸ್ಟ್ ನಲ್ಲಿ ಬರೆಯಲಾಗಿದೆಯಲ್ಲದೆ, ‘ಘರ್ ವಾಪ್ಸಿಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ ಮಾಧ್ಯಮಗಳು ಹಾಗೂ ಬುದ್ಧಿಜೀವಿಗಳು ಇದರ ಬಗ್ಗೆ ಏನು ಹೇಳುತ್ತಾರೆಂಬ ಕುತೂಹಲವಿದೆ’ ಎಂದೂ ಬರೆಯಲಾಗಿದೆ.

ಇದನ್ನು ತಿಳಿದು ಜಿಲ್ಲಾಧಿಕಾರಿ ರವಿ ಝಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಫೇಸ್‌ಬುಕ್‌ನಲ್ಲಿ ಹಾಕಲಾಗಿರುವ ಆದೇಶ ‘ನಿಜವಲ್ಲ’ ಎಂದಿದ್ದಾರೆ. ‘ಈ ಪೇಜ್ ಅನ್ನು ಕೂಡಲೇ ತೆಗೆದು ಬಿಡುವಂತೆ ನಾನು ಹೇಳಿದ್ದೇನೆ. ಇದು ಒಂದು ಅಪರಾಧ. ಅದನ್ನು ಶೇರ್ ಮಾಡಬೇಡಿ’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
 ದಿ ಫ್ರಸ್ಟ್ರೇಟೆಡ್ ಇಂಡಿಯನ್ ಪೇಜ್ ಅನ್ನು ಬಿಜೆಪಿ ಬೆಂಬಲಿಗರು ನಡೆಸುತ್ತಿದ್ದು ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿದ ನಂತರ ವಿವಾದಿತ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಈ ಫೇಸ್‌ಬುಕ್ ಪುಟದ ಅಡ್ಮಿನ್ ಶೆಫಾಲಿ ವೈದ್ಯ ಎನ್ನುವವರಾಗಿದ್ದು ಆಕೆ ಮೋದಿ ಬೆಂಬಲಿಗಳಲ್ಲದೆ, ಮೋದಿ ಪ್ರಧಾನಿಯಾದ ನಂತರ ಅವರ ನಿವಾಸಕ್ಕೆ ಅವರನ್ನು ಭೇಟಿಯಾಗಲು ಆಹ್ವಾನಿಸಲಾದ ಹಲವರ ಪೈಕಿ ಒಬ್ಬರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಸಹಿತ ಹಲವರು ಆಕೆಯ ಫಾಲೋವರ್ಸ್ ಆಗಿದ್ದಾರೆ.

ಬಲಪಂಥೀಯ ಅಜೆಂಡಾ ಬೆಂಬಲಿಸುವ ಈ ವೆಬ್‌ಸೈಟ್ ಅನ್ನು ಅತುಲ್ ಕುಮಾರ್ ಮಿಶ್ರಾ ಎಂಬಾತ ಸ್ಥಾಪಿಸಿದ್ದು ಅದಕ್ಕೆ ಏಳು ಲಕ್ಷಕ್ಕೂ ಹೆಚ್ಚು ‘ಲೈಕ್ಸ್’ ಇರುವುದರಿಂದ ಅದು ಹೇಳುವ ‘ಸುಳ್ಳುಗಳು’ ಕೂಡ ಸಾಕಷ್ಟು ಮಹತ್ವ ಪಡೆಯುತ್ತಿವೆ.
ಇಂತಹ ಫೊಟೋಶಾಪ್ ಮಾಡಲ್ಪಟ್ಟ ಚಿತ್ರಗಳ ಮೂಲಕ ತಪ್ಪು ಮಾಹಿತಿ ಪಸರಿಸುತ್ತಿರುವ ಬಲಪಂಥೀಯ ಸಂಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News