×
Ad

ಬಿಜೆಪಿ ಉಚ್ಚಾಟಿತ ಮುಖಂಡ ದಯಾಶಂಕರ್ ಸಿಂಗ್ ಬಂಧನ

Update: 2016-07-29 16:30 IST

ಪಾಟ್ನಾ,ಜು.29: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ವಿರುದ್ಧ ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದಕ್ಕಾಗಿ ಬಿಜೆಪಿಯಿಂದ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಅವರನ್ನು ಶುಕ್ರವಾರ ಬಿಹಾರದ ಬಕ್ಸರ್‌ನಲ್ಲಿ ಬಂಧಿಸಲಾಗಿದೆ.

ವಾರಕ್ಕೂ ಹಿಂದೆ ಪೊಲೀಸರು ತನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಾಗಿನಿಂದ ಉತ್ತರ ಪ್ರದೇಶ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದ ದಯಾಶಂಕರ್ ಅವರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದರು.

ಈ ವಾರದ ಆದಿಯಲ್ಲಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದ ಕೆಲವು ಛಾಯಾಚಿತ್ರಗಳು ಸಿಂಗ್ ಜಾರ್ಖಂಡನಲ್ಲಿರುವುದನ್ನು ಸೂಚಿಸಿದ್ದವು. ಕಳೆದ ಶನಿವಾರ ದೇವಗಡದ ಪ್ರಸಿದ್ಧ ಶಿವ ದೇವಸ್ಥಾನದಲ್ಲಿ ಸಿಂಗ್ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಈ ಚಿತ್ರಗಳು ತೋರಿಸಿದ್ದವು. ಅವರೊಂದಿಗಿದ್ದ ಸ್ಥಳೀಯ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಈ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದರು.

ಜಾರ್ಖಂಡ್‌ನಲ್ಲಿ ಬಿಜೆಪಿ ಆಡಳಿತವಿರುವುದರಿಂದ ಸಿಂಗ್ ಅಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಬಿಹಾರದ ಸಮ್ಮಿಶ್ರ ಸರಕಾರದ ಪಾಲುದಾರ ಆರ್‌ಜೆಡಿಯ ನಾಯಕಿ ರಾಬ್ಡಿದೇವಿ ಟೀಕಿಸಿದ್ದರು.

ಬಿಎಸ್‌ಪಿ ಚುನಾವಣಾ ಟಿಕೆಟ್‌ಗಳನ್ನು ವಿತರಿಸುವ ರೀತಿಯನ್ನು ಟೀಕಿಸುವ ಭರದಲ್ಲಿ ಸಿಂಗ್ ಪಕ್ಷದ ಅಧಿನಾಯಕಿ ಮಾಯಾವತಿಯನ್ನು ಲೈಂಗಿಕ ಕಾರ್ಯಕರ್ತೆಗೆ ಹೋಲಿಸಿದ್ದರು.

ಸಿಂಗ್ ಅವರ ಈ ಹೇಳಿಕೆ ಎಲ್ಲೆಡೆ ಆಕ್ರೋಶವನ್ನು ಸೃಷ್ಟಿಸಿದ್ದು, ಅವರನ್ನು ದಂಡಿಸದಿದ್ದರೆ ರಾಷ್ಟ್ರಾದ್ಯಂತ ದಲಿತರು ಪ್ರತಿಭಟನೆಗಿಳಿಯಲಿದ್ದಾರೆ ಎಂದು ಮಾಯಾವತಿ ಸಂಸತ್ತಿನಲ್ಲಿ ಎಚ್ಚರಿಕೆ ನೀಡಿದ್ದರು. ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ಶೇ.21ರಷ್ಟು ಪಾಲು ಹೊಂದಿರುವ ದಲಿತರು ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕರಾಗಿದ್ದಾರೆ.

ಸಿಂಗ್ ವಿರುದ್ಧದ ಆಕ್ರೋಶ ಬಿಜೆಪಿಗೆ ಬಿಸಿ ಮುಟ್ಟಿಸಿದ್ದು, ಅದು ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆದರೆ,ಇದು ಸಾಲದು. ಸಿಂಗ್ ವಿರುದ್ಧ ತನ್ನ ಪಕ್ಷವು ದಾಖಲಿಸಿರುವ ಪ್ರಕರಣವನ್ನು ಬಿಜೆಪಿಯೇ ದಾಖಲಿಸಬೇಕಿತ್ತು ಎಂದು ಮಾಯಾವತಿ ಅತೃಪ್ತಿ ವ್ಯಕ್ತಪಡಿಸಿದ್ದರು.

ಬಿಎಸ್‌ಪಿ ಕಾರ್ಯಕರ್ತರು ಸಿಂಗ್ ಅವರನ್ನು ನಿಂದಿಸಿ ಪೋಸ್ಟರ್‌ಗಳನ್ನು ಪ್ರಕಟಿಸಿದ್ದರಲ್ಲದೆ, ಅವರ ನಾಲಗೆಯನ್ನು ಕತ್ತರಿಸಿದವರಿಗೆ 50 ಲ.ರೂ.ಗಳ ಬಹುಮಾನವನ್ನೂ ಘೋಷಿಸಿದ್ದರು.

ತನ್ಮಧ್ಯೆ ಸಿಂಗ್ ಅವರ ಪತ್ನಿ ಬಿಎಸ್‌ಪಿ ನಾಯಕನೋರ್ವ ತನ್ನ 12ರ ಹರೆಯದ ಪುತ್ರಿಗೆ ಲೈಂಗಿಕ ಬೆದರಿಕೆಯನ್ನು ಒಡ್ಡಿದ್ದಾಗಿ ಪೊಲೀಸ್ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News