×
Ad

ಪರ್ಯಾಯ ಚಿಂತನೆಗಳ ಸವಾಲುಗಳು

Update: 2016-07-29 23:15 IST

ಜುಲೈ 2016 ರ 9 ಮತ್ತು 10ನೆ ತಾರೀಕುಗಳಂದು ಎರಡು ದಿನಗಳ ಕಾಲ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲಪುಟ್ಟಪ್ಪಸಭಾಭವನದಲ್ಲಿ ಜನಪರ್ಯಾಯ ಸಮಾವೇಶ ನಡೆಯಿತು. ನಿರೀಕ್ಷೆಗೂ ಮೀರಿ ಯುವ ಮತ್ತು ಮಧ್ಯವಯಸ್ಕ ಜನ ಸುರಿವ ಮುಂಗಾರಿನ ಮಳೆಯಲ್ಲಿ ಶ್ರದ್ಧೆಯಿಂದ ಕೂತಿದ್ದರು. ಬಹುಶಃ ಪ್ರಭುತ್ವದ ನಡೆಗಳನ್ನು ವಿಮರ್ಶಿಸುವ ಈಚಿನ ಎಲ್ಲ ಸಭೆಗಳಲ್ಲಿ ಈ ಥರದ್ದೊಂದು ಶ್ರದ್ಧೆ ಕಾಣಿಸುತ್ತದೆ. ಈ ರೀತಿಯ ಶ್ರದ್ಧೆ ಚಳವಳಿಗಾರರಿಗೆ ಹೊಸ ಆಸೆ ಹುಟ್ಟಿಸುವಂತೆ ಕಾಣಿಸುವುದೇನೋ ನಿಜ. ಆದರೆ ಈ ಶ್ರದ್ಧೆ 80ರ ದಶಕದ ರೈತರಲ್ಲಿ, ದಲಿತರಲ್ಲಿ, ಯುವಕರಲ್ಲಿ, ಕಾರ್ಮಿಕರಲ್ಲಿ ಇದ್ದಂತಹ ಉತ್ಸಾಹದಲ್ಲಿ ಹುಟ್ಟಿದ ಶ್ರದ್ಧೆ ಎನ್ನಿಸುವುದಿಲ್ಲ. ಅಂದಿನ ಚಳವಳಿಗಳಲ್ಲಿ ಹೊಸ ಆವೇಶವೊಂದು ಮೈದುಂಬಿ ಹರಿಯುವಂತೆ, ಉತ್ಸಾಹ, ಸಿಟ್ಟು ಎದೆಗಾರಿಕೆಗಳು ಗುರಿ ಸೇರುವುದು ಗ್ಯಾರಂಟಿ ಎಂಬ ಉಮೇದಿನೊಂದಿಗೆ ಧಾಂಗುಡಿ ಇಡುವ ರಭಸವನ್ನು ದಕ್ಕಿಸಿಕೊಂಡಿದ್ದವು. ಹಾಗಾಗಿಯೇ ಆಳುವವರ ಕಾಲರಿಡಿದು ‘‘ಜನಪರವಾಗಿರಲು ಏನು ಧಾಡಿ ನಿನಗೆ, ನನ್ನ ಬೆವರಿನ ಪ್ರತಿಫಲ ನಿನ್ನ ಗದ್ದುಗೆ, ಬಂಗಲೆ, ಕಾರು, ಮೃಷ್ಟಾನ್ನಗಳು’’ ಎಂದು ಜಗ್ಗಿಸಿ ನ್ಯಾಯ ಕೇಳುವ ದಿಟ್ಟತನವಿತ್ತು. ಅದೊಂದು ಪರಿಭಾಷೆಯಾಗಿ ಇಂದಿಗೂ ಅಲ್ಲಲ್ಲಿ ಸಭೆಗಳಲ್ಲಿ ಮಾರ್ಧನಿಸುತ್ತದೆ. ಆದರೆ ಅದು ಹಲ್ಲು ಉಗುರು ಕಳೆದುಕೊಂಡ ಹುಲಿ ಸಿಂಹಗಳ ರೋದನದಂತೆ ಕೇಳುತ್ತದೆ. ‘‘ಇಕ್ರಲಾ..ವದೀರ್ಲಾ.. ಈ ನನ್ಮಕ್ಕಳ ಮೂಳೆ ಮುರೀರ್ಲಾ’’ ಎಂಬ ಮಾತುಗಳನ್ನೇನಾದರೂ ಆಡಿದರೆ ಅವು ಹಾಸ್ಯಗೋಷ್ಠಿಗಳ ಡೈಲಾಗುಗಳಂತೆ ಇಂದು ಕೇಳಿಸುತ್ತವೆ.
   ಕೆಲವೊಮ್ಮೆ ಚಳವಳಿಗಳಲ್ಲಿ ಭಾಗವಹಿಸುವ ಸಭಿಕರನ್ನು ನೋಡಿದರೆ ರಣ ಬಿರುಗಾಳಿಗೆ ಸಿಲುಕಿ ರೋದಿಸುವ ಮರದ ರೆಂಬೆ ಮರೆಯೊಳಗೆ ಕೂತ ಸಾಲು ಸಾಲು ಹಕ್ಕಿಗಳಂತೆ ಕಾಣಿಸುತ್ತಾರೆ. ಸಂಘಟನೆಗಳು ಜಾತಿ, ತತ್ವ, ಪ್ರಾಂತ, ಊರು ಇತ್ಯಾದಿಗಳ ನೆಲೆಯಲ್ಲಿ ಛಿದ್ರಗೊಂಡು ಹೋಗಿವೆ. ಕತ್ತಲೊಳಗೆ ತಲೆಗೆ, ಮೈಗೆ ಬೀಳುತ್ತಿರುವ ಏಟುಗಳು ಶತ್ರುವಿನವೋ ಇಲ್ಲ ತನ್ನ ಜೊತೆಗಾರರವೋ ಎಂದು ತಿಳಿಯದೆ ಸಿಕ್ಕ ಸಿಕ್ಕ ಕಡೆ ದೊಣ್ಣೆ ಬೀಸುತ್ತಾ ತಾನು ಉಳಿದರೆ ಸಾಕೆಂದು ಒದ್ದಾಡುವ ಘೋರ ಸ್ಥಿತಿಯಲ್ಲಿ ಸಿಲುಕಿಕೊಂಡಿರುವಂತೆ ಚಳವಳಿಗಾರರು ಕಾಣುತ್ತಾರೆ. ಮಾಯಾ ಬೆಳದಿಂಗಳ ನೆರಳು ಬೆಳಕಿನ ಆಟ ಕಟ್ಟಿ ಕುಣಿಯುತ್ತಿರುವ ಜಾಗತೀಕರಣವು ಕೆಲವರ ತಿಜೋರಿಗಳನ್ನು ತುಂಬಿಸಿ ತುಂಬಿಸಿ ನಲಿಯುತ್ತ್ತಿದೆ. ಅದು ದೇವರ ಮಧ್ಯೆ ಸೈತಾನನನ್ನು ಸೃಷ್ಟಿಸುತ್ತಾ ಗೋಜಲು ಮಾಡಿ ದೇವರನ್ನು ಸೈತಾನನೆಂಬಂತೆ, ಸೈತಾನನ್ನು ದೇವರೆಂಬಂತೆ ಬಿಂಬಿಸಿ ಸಂಭ್ರಮಿಸುತ್ತಿದೆ. ಮಾಧ್ಯಮಗಳ ಅಟ್ಟಣಿಗೆ ಮೇಲೆ ನಡೆಯುತ್ತಿರುವ ಈ ಆಟವನ್ನು ನೋಡುತ್ತಾ, ತನ್ನ ಗಾಯಗಳನ್ನು ಗೀರುತ್ತಾ, ನೇವರಿಸುತ್ತಾ, ಆಟವನ್ನು ಕುರಿತು ಬಿಡಿಸಿ ಹೇಳುತ್ತಾ ಕೂತ ನಿರೂಪಕನೆಂಬಂತೆ ಚಳವಳಿಗಾರ ಕಾಣಿಸುತ್ತಿದ್ದಾನೆ.ಇಷ್ಟಾದರೂ ಪ್ರಭುತ್ವವಿನ್ನೂ ಗೆದ್ದ ಸಂಭ್ರಮವನ್ನೂ ಘೋಷಿಸಲಾಗದೆ ಪರಿತಪಿಸುತ್ತಿದೆ. ಸೋಲೊಪ್ಪದ ನೊಣ ಗೆದ್ದೆನೆನ್ನದ ಸಿಂಹ. ನಿರಂತರ ನಡೆವ ಈ ಸಂಘರ್ಷವೇ ಉಳಿದ ಜೀವಗಳಿಗೆ ಭರವಸೆ. ಬಹುಶಃ ನೊಣ ಸಂಪೂರ್ಣ ಸೋಲದು, ಸಿಂಹ ಗೆಲ್ಲದು. ಈ ಜುಗಲ್ಬಂದಿಯೇ ಪ್ರಜಾಪ್ರಭುತ್ವದ ಜೀವಾಳ. ಆದರೆ ಎಲ್ಲರಿಗೂ ಅನ್ನ, ವಿದ್ಯೆ, ಉದ್ಯೋಗ, ಸೂರು, ಶುದ್ಧ ನೀರು, ಸಮಾನ ಖುಷಿ, ಸಮಾನ ದುಃಖವಿರಲಿಯೆಂದರೆ ಯಾಕೆ ಜನ ಬೆಂಬಲಿಸುವುದಿಲ್ಲ. ಪಕ್ಷ ಪರ್ಯಾಯಗಳಲ್ಲೇ ಮುಳುಗಿ ಹೋಗಿರುವ ಜನತೆಯ ಮನಸ್ಸನ್ನು ಅರ್ಥೈಸಿಕೊಂಡು ಅದಕ್ಕೊಂದು ಭರವಸೆ ಹುಟ್ಟಿಸಬಹುದಾದ ಹೋರಾಟದ ಪರಿಭಾಷೆಯನ್ನು ರೂಪಿಸಿ, ಅದು ದೀರ್ಘ ಬಾಳಿಕೆ ಬರಬಲ್ಲುದು ಎಂಬುದನ್ನು ಪ್ರತಿಪಾದಿಸುವ ಅನಿವಾರ್ಯತೆ ಇದೆ.
  ಪದ್ಮರಾಜ ದಂಡಾವತಿಯವರು ಜುಲೈ 10ರ ಪತ್ರಿಕೆಯೊಂದರ ತಮ್ಮ ನಾಲ್ಕನೆ ಆಯಾಮದಲ್ಲಿ ಮೂರನೇ ಪರ್ಯಾಯ ಬರೀ ಕನಸೇ? ಎಂದು ಕೇಳುತ್ತಾ ಕೊನೆಗೆ ಹೀಗೆ ಬರೆಯುತ್ತಾರೆ, ‘‘ಅವರ ಜನರ ಮುಂದೆ ಕಡಿಮೆ ಕೆಟ್ಟ ಆಯ್ಕೆ ಮಾತ್ರ ಇದೆಯೇ? ಒಂದು ಸಾರಿ ಇವರು ಕೆಟ್ಟವರು ಅನಿಸಿದರೆ ಇನ್ನೊಂದು ಸಾರಿ ಅವರು ಕಡಿಮೆ ಕೆಟ್ಟವರು ಎಂದು ಅನಿಸುತ್ತಾರೆ. ಒಂದೋ ಇವರು ಅಧಿಕಾರಕ್ಕೆ ಬರುತ್ತಾರೆ. ಇಲ್ಲವೇ ಅವರು ಅಧಿಕಾರಕ್ಕೆ ಬರುತ್ತಾರೆ.’’
 ಇದರ ಆಚೆಗೆ ಯೋಚಿಸಲು ಮತದಾರರು ಏಕೆ ನಿರಾಕರಿಸುತ್ತಿದ್ದಾರೆ? ಯೋಚಿಸಿದರೂ ಏಕೆ ಬಹುಬೇಗ ಭ್ರಮ ನಿರಸನ ಆಗುತ್ತಿದೆ? ಮತ್ತೆ ಸ್ಥಾಪಿತ ರಾಜಕಾರಣದ ತೆಕ್ಕೆಗೇ ಜನರು ಏಕೆ ಹೋಗುತ್ತಾರೆ? ಹಾಗಾದರೆ, ಮೂರನೆ ಪರ್ಯಾಯ ಎಂಬುದು ಕೇವಲ ಭೋಳೆ ಮಂದಿಯ ಕನಸೇ? ಎಂದು ಕೇಳುವ ಮೂಲಕ ಬಹುಮುಖ್ಯ ಚರ್ಚೆಯನ್ನು ಎತ್ತಿದ್ದಾರೆ. ಇದು ಮೂರ್ಖರಾದ ಜನರಿಗೆ ಮಹತ್ತಾದ ಕನಸುಗಳಿಲ್ಲದೇ ಇರುವುದರಿಂದ ಬದಲಾವಣೆಯೆಂಬುದು ಸಾಧ್ಯವಿಲ್ಲ ಎಂಬ ಒಂದು ಧ್ವನಿಯನ್ನು ಹೊರಡಿಸಿದರೆ, ಮತ್ತೊಂದು ಚಳವಳಿಗಾರರ ಭೋಳೆತನವನ್ನು ಕಂಡು ಜನ ಬೇಸತ್ತಿದ್ದಾರೆ, ಜನರ ಆಲೋಚನೆಗಳಿಗೆ ಅನುಗುಣವಾಗಿ ಚಳವಳಿಗಾರರು ನಡೆದುಕೊಳ್ಳುತ್ತಿಲ್ಲ. ಅಥವಾ ಚಳವಳಿಗಾರರ ಭಾಷೆ ಜನರಿಗೆ ಅರ್ಥವೇ ಆಗುತ್ತಿಲ್ಲ. ಹಾಗಾಗಿ ಇಲ್ಲಿ ನಡೆಯುತ್ತಿರುವ ಎಲ್ಲ ಪ್ರಯತ್ನಗಳೂ ನಿರರ್ಥಕವೇ? ಎಂಬ ಧಾಟಿಯಲ್ಲಿ ಮತ್ತು ಪತ್ರಿಕೋದ್ಯಮದ ತುರ್ತಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ದಂಡಾವತಿಯವರು ಎತ್ತಿರುವ ಪ್ರಶ್ನೆಗಳನ್ನು ಸುಲಭಕ್ಕೆ ನಿರ್ಲಕ್ಷಿಸ ಲಾಗದು. ಪರ್ಯಾಯ ರಾಜಕಾರಣದ ಕುರಿತು ಮಾತನಾಡುವಾಗಲೆಲ್ಲ ಬಹುಸಂಖ್ಯೆಯ ಜನರು ದಂಡಾವತಿಯರ ಮಾತುಗಳ ಜಾಡಿನಲ್ಲಿಯೇ ಪ್ರಶ್ನೆಗಳನ್ನೆತ್ತುತ್ತಾರೆ. ಯಾಕೆಂದರೆ ಪರ್ಯಾಯದ ಕುರಿತಂತೆ ನಡೆದಿರುವ ಪ್ರಯತ್ನಗಳಲ್ಲಿ ಬಹುಪಾಲು ಆಶಯಾತ್ಮಕವಾಗಿದೆಯೇ ಹೊರತು, ಅವು ಫಲಿತಾಂಶ ನೀಡುವಂತಿರುವುದಿಲ್ಲ. ಆಶಯಾತ್ಮಕ ಪರ್ಯಾಯದ ಮಾದರಿಗಳು ತಾಳಿಕೆ ಮತ್ತು ಬಾಳಿಕೆಯ ಮಾದರಿಗಳಾಗಿ ರೂಪುಗೊಳ್ಳುತ್ತಿಲ್ಲ. ನಿಜದ ರಚನಾತ್ಮಕ, ವೈಚಾರಿಕ ಹಾಗೂ ಪ್ರಾಯೋಗಿಕವಾದ ಪರ್ಯಾಯವಾಗುವಲ್ಲಿ ಸೋಲುತ್ತಿರುವುದರಿಂದಲೇ ಅವು ಕೇವಲ ಆಶಯಾತ್ಮಕ ಪರ್ಯಾಯಗಳಾಗಿ ಮಾತ್ರ ಉಳಿದಿವೆ. ಬಹಳ ಸಾರಿ ಇವಕ್ಕೆ ಸೈದ್ಧಾಂತಿಕವಾದ ತಳಹದಿ ಇರುವುದಿಲ್ಲ. ಈ ಮಾದರಿಯ ಪ್ರಯೋಗಗಳು ಪಕ್ಷ ಪರ್ಯಾಯಗಳಾಗಿ ಮಾತ್ರ ಪರ್ಯಾವಸಾನವಾಗುತ್ತಿವೆ. ಅಧಿಕಾರ ಹಿಡಿಯುವ ಪ್ರಯತ್ನದ ಭಾಗವಾಗಿ ಪರ್ಯಾಯ ಪ್ರಯತ್ನ ಎಂಬಂತಾಗಿದೆ. ಆದ್ದರಿಂದಲೋ ಏನೋ ಜನ ನಂಬುವ ಸ್ಥಿತಿಯಲ್ಲಿಲ್ಲ ಎನ್ನಿಸುತ್ತದೆ
ದಂಡಾವತಿಯವರು ಉದಾಹರಿಸುವ ರೈತಸಂಘ, ಪ್ರಗತಿರಂಗ, ಎಎಪಿ ಮುಂತಾದ ಪರ್ಯಾಯ ಮಾದರಿಗಳೆಲ್ಲವೂ ಪಕ್ಷ ಪರ್ಯಾಯಗಳಾಗಿ ಮಾತ್ರ ಬೆಳೆದು ನಿರಾಶೆಯ ಹಾದಿಗೆ ಹೆಜ್ಜೆ ಬೆಳೆಸಿದ ಪರ್ಯಾಯಗಳಾಗಿವೆ. ಇವು ಜನರಿಗೆ ತಕ್ಷಣದ ಸಣ್ಣ ಸಣ್ಣ ಖುಷಿಗಳನ್ನು ನೀಡಬಲ್ಲವೇ ಹೊರತು ನಿಜದ ಪರ್ಯಾಯಗಳಾಗುತ್ತಿಲ್ಲ. ಇವುಗಳಲ್ಲಿ ಸಾಮಾಜಿಕ ನ್ಯಾಯ, ಸಮಾನತೆಯ ಆಶಯ, ಜನರ ಆರ್ಥಿಕ ಚಲನೆಗಳನ್ನು ಭರವಸೆಯ ಹಾದಿಗೆ ಮುನ್ನಡೆಸುವಿಕೆಯಂತಹ ಸಾಧ್ಯತೆಗಳು ಕಡಿಮೆ ಎನ್ನಬೇಕಷ್ಟೆ.
 ಪ್ರಜಾಪ್ರಭುತ್ವದ ಉಳಿವು ನಿಂತಿರುವುದೇ ಜನರ ಪ್ರತಿಭಟನೆಗಳ ಬೇರಿನಲ್ಲಿ. ಆಳುವವರನ್ನು ಕೇಳುವವರು ಇಲ್ಲದಿದ್ದರೆ ಪ್ರಜಾಪ್ರಭುತ್ವ ಉಳಿಯುವುದು ಹೇಗೆ? ಗಾಂಧೀಜಿಯವರು, ‘‘ಆಳುತ್ತಿರುವವರು ನನ್ನ ಜನರೇ ಆಗಿದ್ದೂ ತಪ್ಪು ಮಾಡಿದರೆ ಅವರ ವಿರುದ್ಧವೂ ಪ್ರತಿಭಟಿಸುತ್ತೇನೆ’’ ಎಂದಿದ್ದರು. ಒತ್ತಡಗುಂಪುಗಳು ಈ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿವೆ. ಆದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ, ಈ ಒತ್ತಡ ಗುಂಪುಗಳ ಶಕ್ತಿ ನಿರಂತರ ಕುಸಿತದ ಹಾದಿಯಲ್ಲೇ ನಡೆಯುತ್ತಿರುವಂತೆ ಕಾಣಿಸುತ್ತದೆ. ಹಾಗಾಗಿಯೇ ಡಿ.ಆರ್. ನಾಗರಾಜರು ಇದನ್ನು ‘ಅವಸರ್ಪಿಣಿ ಕಾಲ’ವೆಂದು ಕರೆದಿದ್ದರು. ಈ ದಶಕಗಳಲ್ಲಿ ಬಂಡವಾಳ ಮಾತ್ರ ಪ್ರಭುತ್ವವನ್ನು ರೂಪಿಸಿ ನಿಯಂತ್ರಿಸಿ ಮುನ್ನಡೆಸಬಲ್ಲುದು ಎಂಬ ಸ್ಥಿತಿಗೆ ಬಂದು ತಲುಪಿರುವುದರಿಂದ ಭರವಸೆಗಳು ಕಡಿಮೆಯಾಗುತ್ತಿವೆ ಎಂಬ ಆತಂಕ ಹೆಚ್ಚುತ್ತಿದೆ.
ಜನರ ಉದ್ಯೋಗ, ಆಹಾರ, ನೀರು, ವಸತಿ, ಒಟ್ಟಿಗೆ ಹೊಂದಿಕೊಂಡು ಸಹನೆಯಿಂದ ಬಾಳುವ ಅವಕಾಶಗಳು ಕಡಿಮೆಯಾಗುತ್ತಿವೆ. ಇದರ ಬದಲಾಗಿ ಜಾತಿ, ಧರ್ಮ, ಭಾಷೆ, ಆಹಾರ, ಸೈದ್ಧಾಂತಿಕ ನಿಲುವು ಇವುಗಳನ್ನು ಆಧರಿಸಿ ಜನರನ್ನು ಒಡೆದು ಆಳುವ ಪ್ರವೃತ್ತಿ ಹೆಚ್ಚುತ್ತಿದೆ.ಹಾಗಾಗಿ ಮುಖ್ಯವಾಗಿ ಚರ್ಚೆಯಾಗಬೇಕಿದ್ದ ವಿಚಾರಗಳು ಮರೆಯಾಗಿ ಬಹುರಾಷ್ಟ್ರೀಯ, ರಾಷ್ಟ್ರೀಯ ಕಂಪೆನಿಗಳ ಆಸ್ತಿ ಲಕ್ಷ ಕೋಟಿಗಳಲ್ಲಿ ಏರಿಕೆ ಕಾಣುತ್ತಿದೆ, ಬದಲಾಗಿ ಲಕ್ಷಗಟ್ಟಲೆ ರೈತರ ಆತ್ಮಹತ್ಯೆಗಳು ಸಹ ಅದೇ ಪ್ರಮಾಣದಲ್ಲಿ ಏರುತ್ತಿವೆ.
ಈ ಸಂದರ್ಭದಲ್ಲಿ ಪರ್ಯಾಯ ರಾಜಕಾರಣದ ಕುರಿತು ಸಮಾಲೋಚನೆಗಳು ಹೆಚ್ಚಾಗುತ್ತಿವೆ. ಹಾಗಿದ್ದರೆ ಒತ್ತಡಗುಂಪುಗಳು ಹಾಗೂ ಪರ್ಯಾಯ ರಾಜಕಾರಣದ ಪರಿಭಾಷೆ ಮಂಡಿಸುತ್ತಿರುವ ಸಮೂಹಗಳೆರಡನ್ನೂ ಒಂದೇ ತಕ್ಕಡಿಯಲ್ಲಿ ನೋಡಬೇಕೇ? ಎಂಬ ಪ್ರಶ್ನೆ ಎದುರಾಗುತ್ತದೆ. ನಿರಂತರವಾಗಿ ಒತ್ತಡಗುಂಪುಗಳಲ್ಲಿ ಕಾಣಿಸಿಕೊಂಡಿದ್ದ ಹಿರೇಮಠ್ ಥರದವರೂ ಪರ್ಯಾಯ ರಾಜಕಾರಣದ ಅಗತ್ಯದ ಕುರಿತು ಮಾತನಾಡುತ್ತಿದ್ದಾರೆ. ಸರಳವಾಗಿ ಹೇಳಬೇಕೆಂದರೆ ಒತ್ತಡಗುಂಪುಗಳು ತಮ್ಮ ನಿರಂತರ ಒತ್ತಡದ ರಾಜಕಾರಣದಿಂದ ಸದ್ಯದ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ರಿಪೇರಿ ಮಾಡಬೇಕೆಂದು ಯೋಚಿಸುತ್ತಾರೆ. ಪರ್ಯಾಯದ ಪರಿಭಾಷೆಯವರು ವ್ಯವಸ್ಥೆಯ ರಚನೆಯಲ್ಲೇ ದೋಷಗಳಿವೆ ಹಾಗಾಗಿ ಅದನ್ನು ತಳಮಟ್ಟದಿಂದ ಬದಲಾಯಿಸಬೇಕೆಂದು ಬಯಸುತ್ತಾರೆ. ಇವರು ತಕ್ಷಣಕ್ಕೆ ಚುನಾವಣಾ ರಾಜಕೀಯಕ್ಕೆ ಹೋಗಬಾರದೆಂದು ಪ್ರತಿಪಾದಿಸುತ್ತಾರೆ. ಈ ನಿಲುವನ್ನು ಒತ್ತಡಗುಂಪಿನ ರಾಜಕಾರಣ ಮಾಡುವ ಅನೇಕರು ವಿರೋಧಿಸುತ್ತಾರೆ. ಇದು ಎಡ ಮತ್ತು ಉದಾರವಾದಿ ರಾಜಕೀಯ ನಿಲುವುಗಳ ಬಿಕ್ಕಟ್ಟಿನಂತೆ ಕಾಣುತ್ತದೆ. ಈ ವಿಚಿತ್ರ ಸಂದಿಗ್ಧದಲ್ಲಿ ಪರ್ಯಾಯ ರಾಜಕಾರಣದ ಚರ್ಚೆಗಳು ನಡೆಯುತ್ತಿವೆ.
ಇನ್ನೊಂದು ಗುಂಪು ಬಲಪಂಥೀಯರದು ಸಾಂಸ್ಕೃತಿಕ ರಾಜಕಾರಣವಾದ್ದ ರಿಂದ ಅದಕ್ಕೆ ಪರ್ಯಾಯವಾದ ಜನಸಂಸ್ಕೃತಿಯ ರಾಜಕಾರಣ ಮಾಡಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಇದನ್ನು ಪ್ರಶ್ನಿಸುವವರು ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅನೇಕರು ಧಾರ್ಮಿಕ, ಸಾಂಸ್ಕೃತಿಕ ಪರಿಭಾಷೆಯಲ್ಲಿ ವೈದಿಕ ಪರಿಭಾಷೆಗೆ ಎದುರಾಗಿದ್ದಾರೆ ಹಾಗಾಗಿ ಮತ್ತೆ ಮತ್ತೆ ಅದೇ ಪರಿಭಾಷೆಯಲ್ಲಿ ಉತ್ತರ ಹುಡುಕಿದರೆ ಬಿಡುಗಡೆ ಎಂದು? ಎನ್ನುತ್ತಾರೆ. ಹಾಗಾದರೆ ಪೆರಿಯಾರ್ ರೀತಿಯ ನಿರಾಕರಣೆಯ ಮಾದರಿ ಜನಸಮ್ಮತವೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಮಾದರಿಯನ್ನು ನಿರಾಕರಿಸಿದ್ದ ಕುವೆಂಪು ಅವರ ಮಾದರಿಯನ್ನೇ ದೇವನೂರರೂ ಪ್ರತಿಪಾದಿಸುತ್ತಿದ್ದಾರೆ.

Writer - ತಿರುಮಲೇಶ್ ಭತ್ತದಮಡು

contributor

Editor - ತಿರುಮಲೇಶ್ ಭತ್ತದಮಡು

contributor

Similar News