ಬ್ಯಾಂಕ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಬಿಹಾರದ ಶಾಸಕ
ಕಥಿಹಾರ್,ಜು.30: ಬಿಹಾರದ ಕಥಿಹಾರ್ ಜಿಲ್ಲೆಯ ಗ್ವಾಲ್ಟೋಲಿಯಲ್ಲಿ ಬ್ಯಾಂಕ್ ಮ್ಯಾನೇಜರ್‌ವೋರ್ವರಿಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ಬಲಿರಾಮಪುರ ವಿಧಾನಸಭಾ ಕ್ಷೇತ್ರದ ಸಿಪಿಐ(ಎಂಎಲ್) ಶಾಸಕ ಮೆಹಬೂಬ ಆಲಂ ಅವರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ಶಾಸಕರು ತನಗೆ ಕಪಾಳಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಶಾಖೆಯನ್ನು ಬಲವಂತದಿಂದ ಮುಚ್ಚಿಸಲು ಯತ್ನಿಸಿದ್ದು, ತನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಿದ್ದಾರೆ ಎಂದು ಅಲಹಾಬಾದ್ ಬ್ಯಾಂಕಿನ ಗ್ವಾಲ್ಟೋಲಿ ಶಾಖೆಯ ವ್ಯವಸ್ಥಾಪಕ ರಾಕೇಶ ರಂಜನ್ ಅವರು ಶುಕ್ರವಾರ ಎಸ್‌ಪಿ ಸಿದ್ಧಾರ್ಥ ಮೋಹನ ಜೈನ್ ಅವರಿಗೆ ದೂರು ಸಲ್ಲಿಸಿದ್ದರು. ಗುರುವಾರ ಈ ಘಟನೆ ನಡೆದಿತ್ತು. ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿರುವ ಆಲಂ, ರಂಜನ್ ಭ್ರಷ್ಟ ವ್ಯಕ್ತಿಯಾಗಿದ್ದಾರೆ. ಜನರ ಸಮಸ್ಯೆಯ ಕುರಿತು ಚರ್ಚಿಸಲು ತಾನು ಅವರ ಬಳಿಗೆ ತೆರಳಿದ್ದೆ ಎಂದು ಹೇಳಿದ್ದಾರೆ. ಕಪಾಳಮೋಕ್ಷದ ದೃಶ್ಯವು ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಫೂಟೇಜನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.