×
Ad

ಮಣಿಪುರ: ಇಬ್ಬರು ಸೌದಿ ಪ್ರಜೆಗಳು ಸೇರಿದಂತೆ ಮೂವರು ಕೈದಿಗಳ ಹತ್ಯೆ

Update: 2016-07-30 20:28 IST

ಇಂಫಾಲ,ಜು.30: ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯ ಸಜಿವಾ ಸೆಂಟ್ರಲ್ ಜೈಲಿನಲ್ಲಿ ಶನಿವಾರ ನಸುಕಿನಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಸೌದಿ ಪ್ರಜೆಗಳು ಸೇರಿದಂತೆ ಮೂವರು ವಿಚಾರಣಾಧೀನ ಕೈದಿಗಳು ಕೊಲ್ಲಲ್ಪಟ್ಟಿದ್ದಾರೆ. ತನ್ನ ಇಬ್ಬರು ಪ್ರಜೆಗಳ ಹತ್ಯೆ ಕುರಿತು ಸೌದಿ ಅರೇಬಿಯಾವು ಮಾಹಿತಿಯನ್ನು ಕೋರಿರುವ ಹಿನ್ನೆಲೆಯಲ್ಲಿ ಘಟನೆಯ ಕುರಿತು ವರದಿಯನ್ನು ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಮಣಿಪುರ ಸರಕಾರಕ್ಕೆ ಸೂಚಿಸಿದೆ.
40-45ರ ವಯೋಮಾನದ ಸೌದಿ ಪ್ರಜೆಗಳಾದ ಸುಶಾಕ್ ಅಹ್ಮದ್ ಮತ್ತು ಅಬ್ದುಲ್ ಸಲಾಂ ಅವರು ಶುಕ್ರವಾರ ಮಧ್ಯರಾತ್ರಿಯ ಬಳಿಕ ಇನ್ನೋರ್ವ ವಿಚಾರಣಾಧೀನ ಕೈದಿ,ಮಣಿಪುರದ ಚುಡಾಚಂದ್ರಪುರದ ನಿವಾಸಿ ಥಂಗ್ಮಿಲಿಯೆನ್ ಝೌ ಎಂಬಾತನನ್ನು ಹರಿತವಾದ ಶಸ್ತ್ರಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಇತರ ಕೈದಿಗಳು ಸೌದಿ ಪ್ರಜೆಗಳನ್ನು ಥಳಿಸಿ ಕೊಂದಿದ್ದಾರೆ. ಅಹ್ಮದ್ ಮತ್ತು ಸಲಾಂ ಶಸ್ತ್ರಾಸ್ತ್ರಗಳನ್ನು ಜೈಲಿನೊಳಕ್ಕೆ ಹೇಗೆ ತಂದಿದ್ದರು ಎನ್ನುವುದು ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ. ಒಂದು ಗಂಟೆಗೂ ಅಧಿಕ ಕಾಲ ಹಿಂಸಾಚಾರ ನಡೆದಿದ್ದರೂ ಜೈಲು ಸಿಬ್ಬಂದಿಗಳು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಪ್ರವೇಶಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

2013ರಲ್ಲಿ ಅಧಿಕೃತ ಪ್ರಯಾಣ ದಾಖಲೆಗಳಿಲ್ಲದೆ ಮಣಿಪುರವನ್ನು ಪ್ರವೇಶಿಸಿದ್ದಕ್ಕಾಗಿ ಸೌದಿ ಪ್ರಜೆಗಳನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಯನ್ನು ಎದುರಿಸುತ್ತಿದ್ದರು. ಝೌನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ 2010ರಲ್ಲಿ ಬಂಧಿಸಲಾಗಿತ್ತು. ಎಲ್ಲ ಮೂರೂ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜೆ.ಎನ್.ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News