ಜಿಎಸ್‌ಟಿ ಮಸೂದೆ ತಿದ್ದುಪಡಿಗಳ ಪ್ರತಿ ವಿತರಣೆ

Update: 2016-08-02 18:15 GMT

ಹೊಸದಿಲ್ಲಿ,ಆ.2: ರಾಜ್ಯಸಭೆಯಲ್ಲಿ ಸುದೀರ್ಘ ಕಾಲದಿಂದ ಬಾಕಿಯುಳಿದಿರುವ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಕೊನೆಗೂ ಮುಕ್ತಿ ದೊರೆಯುವ ಕಾಲ ಬಂದಿದೆ. ಬುಧವಾರ ರಾಜ್ಯಸಭೆಯಲ್ಲಿ ಮಸೂದೆಯ ಮೇಲೆ ಚರ್ಚೆಗೆ ಸಜ್ಜಾಗಿರುವ ಸರಕಾರವು ಶೇ.1 ಹೆಚ್ಚುವರಿ ತೆರಿಗೆಯನ್ನು ಕೈಬಿಡುವ,ರಾಜ್ಯಗಳಿಗೆ ಐದು ವರ್ಷಗಳ ಆದಾಯ ನಷ್ಟವನ್ನು ಭರ್ತಿ ಮಾಡುವ ಖಾತರಿ ನಿಯಮವನ್ನು ಮಸೂದೆಯಲ್ಲಿ ಸೇರಿಸುವ ಅಧಿಕೃತ ತಿದ್ದುಪಡಿಗಳ ಪ್ರತಿಗಳನ್ನು ಸದಸ್ಯರಿಗೆ ವಿತರಿಸಿದೆ.

 ಈ ತಿದ್ದುಪಡಿಗಳಂತೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ಪ್ರತ್ಯೇಕವಾಗಿ ವಿವಿಧ ರಾಜ್ಯಗಳ ಮಧ್ಯೆ ಉದ್ಭವಿಸಬಹುದಾದ ವಿವಾದಗಳನ್ನು ಬಗೆಹರಿಸಲು ಸೂಕ್ತ ವ್ಯವಸ್ಥೆಯನ್ನು ಜಿಎಸ್‌ಟಿ ಮಂಡಳಿಯು ರೂಪಿಸಬೇಕಾಗುತ್ತದೆ.
ಈ ಅಧಿಕೃತ ತಿದ್ದುಪಡಿಗಳೊಂದಿಗೆ ಸರಕಾರವು ರಾಜ್ಯಸಭೆಯಲ್ಲಿ ಮಸೂದೆಯ ಅಂಗೀಕಾರಕ್ಕೆ ತಡೆಯನ್ನೊಡ್ಡುತ್ತಿರುವ ಕಾಂಗ್ರೆಸ್ ಪಕ್ಷದ ಬೇಡಿಕೆಗಳನ್ನು ಭಾಗಶಃ ಈಡೇರಿಸಿದೆ. ಕಾಂಗ್ರೆಸ್ಸಿನ ಮೂರು ಬೇಡಿಕೆಗಳಲ್ಲಿ ಶೇ.1 ಹೆಚ್ಚುವರಿ ತಯಾರಿಕೆ ತೆರಿಗೆಯನ್ನು ಕೈಬಿಡಬೇಕೆನ್ನುವುದು ಒಂದಾಗಿತ್ತು.
 ಜಿಎಸ್‌ಟಿ ವಿವಾದಗಳನ್ನು ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸಬೇಕೆಂಬ ಬೇಡಿಕೆ ಕುರಿತಂತೆ ಅಧಿಕೃತ ತಿದ್ದುಪಡಿಗಳು,ವಿವಾದಗಳನ್ನು ಬಗೆಹರಿಸಲು ಜಿಎಸ್‌ಟಿ ಮಂಡಳಿಯು ವ್ಯವಸ್ಥೆಯೊಂದನ್ನು ರೂಪಿಸಲಿದೆ ಎಂದು ಹೇಳಿವೆ.
ಸಂವಿಧಾನದಲ್ಲಿ ಜಿಎಸ್‌ಟಿ ದರ ಮಿತಿಯನ್ನು ಸೇರಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಈ ಅಧಿಕೃತ ತಿದ್ದುಪಡಿಗಳಲ್ಲಿ ಏನನ್ನೂ ಹೇಳಲಾಗಿಲ್ಲ.
ಲೋಕಸಭೆಯು 2015 ಮೇ ತಿಂಗಳಲ್ಲಿ ಜಿಎಸ್‌ಟಿ ಮಸೂದೆಯನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News