ಕಬಾಲಿ ಬಾಲಿವುಡ್‌ಗೆ?
‘ತಲೈವಾ’ ರಜನಿಕಾಂತ್ ಅಭಿನಯದ ಕಬಾಲಿ 2 ಚಿತ್ರ, ದೇಶ, ವಿದೇಶಗಳಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವಂತೆಯೇ, ಈ ಸಿನೆಮಾದ ಎರಡನೆ ಭಾಗವನ್ನು ನಿರ್ಮಿಸಲು ನಿರ್ಮಾಪಕ ಕಲೈಪುಲಿ ಎಸ್.ತನು ನಿರ್ಧರಿಸಿದ್ದಾರೆ. ಕಬಾಲಿಯ ಕಥೆಯು ಹಠಾತ್ತನೆ ಕೊನೆಗೊಳ್ಳುವುದನ್ನು ಗಮನಿಸಿದ ಪ್ರೇಕ್ಷಕರಿಗೆ ಈ ಚಿತ್ರದ ಎರಡನೆ ಭಾಗವು ಬರಲಿದೆಯೆಂಬುದು ಮನದಟ್ಟಾಗಿದೆ. ನಿರ್ದೇಶಕ ಪಾ.ರಂಜಿತ್ ಕೂಡಾ ಕಬಾಲಿ-2 ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅದೇನೆ ಇದ್ದರೂ, ರಜನಿಕಾಂತ್ ಒಪ್ಪಿ ಕೊಂಡಲ್ಲಿ ಮಾತ್ರ ಅದು ಸಾಧ್ಯವಾಗಲಿದೆ ಯೆಂದು ತನು ಹೇಳಿದ್ದಾರೆ. ಆದರೆ ರಜನಿ, ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಈ ಬಗ್ಗೆ ನಿರ್ಧಾರಕ್ಕೆ ಬರಲಿದ್ದಾರೆಂದು ಹೇಳಲಾಗುತ್ತಿದೆ.
ಇತ್ತ ಬಾಲಿವುಡ್ ಕೂಡಾ ಕಬಾಲಿ ಬಗ್ಗೆ ಆಸಕ್ತಿ ವಹಿಸಿದೆ. ಬಿಗ್ ಬಿ ಅಮಿತಾಭ್ ಬಚ್ಚನ್, ಹಿಂದಿ ರಿಮೇಕ್‌ನಲ್ಲಿ ಕಬಾಲಿ ಪಾತ್ರ ನಿರ್ವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಮಾರ್ಪಾಡುಗಳನ್ನು ಮಾಡಿಕೊಂಡು ಕಬಾಲಿಯನ್ನು ರಿಮೇಕ್ ಮಾಡಿದಲ್ಲಿ ಖಂಡಿತವಾಗಿಯೂ ಅದು ಹಿಂದಿ ಪ್ರೇಕ್ಷಕರಿಗೆ ಇಷ್ಟವಾಗಲಿದೆಯೆಂದು ಅಮಿತಾಬ್ ಅಭಿಪ್ರಾಯಿಸಿದ್ದಾರೆ. ಈ ಹಿಂದೆ ಅಮಿತಾಭ್ ಅಭಿನಯದ ಚಿತ್ರಗಳ ತಮಿಳು ರಿಮೇಕ್‌ಗಳಲ್ಲಿ ರಜನಿ ಅಭಿನಯಿಸಿದ್ದರು. ಈಗಾಗಲೇ ಕಬಾಲಿಯ ಹಿಂದಿ ಡಬ್ಬಿಂಗ್ ಬಿಡುಗಡೆಯಾಗಿದ್ದರೂ, ಅದಕ್ಕೆ ಬಾಲಿವುಡ್ ಪ್ರೇಕ್ಷಕರಿಂದ ಅಷ್ಟೇನೂ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.