×
Ad

ಪದ್ಮಾವತಿಯಲ್ಲಿ ಫವಾದ್ ನಟಿಸುವುದಿಲ್ಲ

Update: 2016-08-03 14:59 IST

ಬಾಲಿವುಡ್‌ನ ಮೆಗಾಬಜೆಟ್ ಚಿತ್ರಗಳ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿಯ ‘ಪದ್ಮಾವತಿ’ಯಲ್ಲಿ ದೀಪಿಕಾ ಜೊತೆ ಪಾಕ್ ಮೂಲದ ಜನಪ್ರಿಯ ನಟ ಫವಾದ್‌ಖಾನ್ ನಟಿಸಲಿದ್ದಾರೆಂಬ ಸುದ್ದಿಯು ಬಾಲಿವುಡ್ ಪ್ರೇಕ್ಷಕರನ್ನು ಪುಳಕಗೊಳಿಸಿತ್ತು. ಆದರೆ ಇದೀಗ ಈ ಅದ್ದೂರಿ ಚಿತ್ರದಲ್ಲಿಫವಾದ್ ನಟಿಸುವುದಿಲ್ಲವೆಂಬ ಸುದ್ದಿಯನ್ನು ಚಿತ್ರತಂಡ ದೃಢಪಡಿಸಿದೆ. ಫವಾದ್‌ಖಾನ್ ಈಗಾಗಲೇ ಕರನ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಿರುವ ಮೂರು ಚಿತ್ರಗಳಿಗೂ ಕಮಿಟ್ ಆಗಿದ್ದಾರೆ. ಜೊತೆಗೆ ಪಾಕಿಸ್ತಾನದಲ್ಲಿಯೂ ಅವರು ಕೆಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಪದ್ಮಾವತಿಯಲ್ಲಿ ನಟಿಸಲು ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಆದರೆ ಕೆಲವು ಮೂಲಗಳ ಪ್ರಕಾರ, ಅವರು ಚಿತ್ರದಲ್ಲಿ ನಟಿಸದಿರಲು ಬೇರೆಯೇ ಕಾರಣ ಇದೆಯಂತೆ. ಈ ಚಿತ್ರದಲ್ಲಿ ಫವಾದ್ ಅವರು ಪದ್ಮಾವತಿಯ ಪತಿ ರಾಜಾ ರಾವತ್‌ಸಿಂಗ್‌ನ ಪಾತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ ಕಥೆಯಲ್ಲಿ ಆ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿಲ್ಲವಂತೆ. ಹೀಗಾಗಿ ಫವಾದ್ ಮಾತ್ರವಲ್ಲ, ಬಾಲಿವುಡ್‌ನ ಇನ್ನಾವುದೇ ಖ್ಯಾತ ನಟರು ಆ ಪಾತ್ರವನ್ನು ನಿರ್ವಹಿಸಲು ಆಸಕ್ತಿ ವಹಿಸುತ್ತಿಲ್ಲವೆಂದು ಹೇಳಲಾಗುತ್ತಿದೆ. ಮೇವಾಡದ ರಜಪೂತ ರಾಣಿ ಪದ್ಮಾವತಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದರೆ, ಚಿತ್ರದಲ್ಲಿ ಅಲಾವುದ್ದೀನ್ ಖಿಲ್ಜಿ ಯಾಗಿ ರಣವೀರ್‌ಸಿಂಗ್ ನಟಿಸುವುದು ಖಚಿತವಾಗಿದೆ. ವಿಶೇಷವೆಂದರೆ ಇಡೀ ಚಿತ್ರದಲ್ಲಿ ಪದ್ಮಾವತಿ ಹಾಗೂ ಖಿಲ್ಜಿ ಪಾತ್ರಗಳು ಪ್ರಮುಖವಾಗಿದ್ದರೂ, ಅವು ಯಾವತ್ತೂ ಮುಖಾಮುಖಿಯಾಗುವುದಿಲ್ಲವಂತೆ. ಹೀಗಾಗಿ ರಣವೀರ್ ಹಾಗೂ ದೀಪಿಕಾ ಅಭಿನಯದ ದೃಶ್ಯಗಳು ಪ್ರತ್ಯಪ್ರತ್ಯೇಕವಾಗಿ ಚಿತ್ರೀಕರಣಗೊಳ್ಳಲಿವೆ. ಪಾತ್ರವರ್ಗದ ಆಯ್ಕೆಯ ಸಮಸ್ಯೆಯ ಕಾರಣದಿಂದಾಗಿ ಪದ್ಮಾವತಿಯ ಆರಂಭಕ್ಕೆ ತೊಡಕಾಗಿದೆ. ಏನೇ ಇದ್ದರೂ, ಪದ್ಮಾವತಿಯ ಚಿತ್ರೀಕರಣವನ್ನು ಬನ್ಸಾಲಿ ಸೆಪ್ಟ್ಟಂಬರ್‌ನಲ್ಲಿ ಆರಂಭಿಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News