ಕೈಚಾಚುವ ಪರಿಸ್ಥಿತಿ ತಪ್ಪಿಸಲು ಕೈಗಾಡಿಯಲ್ಲಿ ಆಹಾರ ಮಾರುತ್ತಿರುವ ಗೃಹಿಣಿ !

Update: 2016-08-04 07:33 GMT

ಗುರ್‌ಗಾಂವ್, ಆ.4: ಮೂರು ಕೋಟಿ ರೂ. ಬೆಲೆಬಾಳುವ ಐಷಾರಾಮಿ ಬಂಗಲೆ ಹಾಗೂ ಎಸ್‌ಯುವಿಯ ಮಾಲಕಿಯಾಗಿರುವ ಮಹಿಳೆಯೊಬ್ಬರು ರಸ್ತೆ ಬದಿ ತಳ್ಳುಗಾಡಿಯಲ್ಲಿ ಆಹಾರ ಮಾರುತ್ತಾರೆಂದು ಹೇಳಿದರೆ ನಂಬಲು ಸಾಧ್ಯವೇ? ಆದರೆ ಇದನ್ನು ನಂಬಲೇ ಬೇಕು. ಮಾಜಿ ಶಿಕ್ಷಕಿಯಾಗಿರುವ 34 ವರ್ಷದ ಊರ್ವಶಿ ಯಾದವ್ ಸೆಕ್ಟರ್ 14 ಮಾರ್ಕೆಟ್ ಪ್ರದೇಶದಲ್ಲಿರುವ ಅರಳಿ ಮರದ ಕೆಳಗೆ ಕಳೆದ 45 ದಿನಗಳಿಂದ ರಸ್ತೆ ಬದಿಯಲ್ಲಿ ಕೈಗಾಡಿಯೊಂದರಲ್ಲಿ ಚೋಲೆ-ಚೋಲೆ ಹಾಗೂ ಪರೋಟ ಮಾರುತ್ತಿದ್ದಾರೆ.

ಆಕೆಯ ಪತಿ ಇತ್ತೀಚೆಗೆ ಅನಾರೋಗ್ಯಪೀಡಿತರಾಗಿದ್ದು, ವೈದ್ಯರು ಹಿಪ್ ರಿಪ್ಲೇಸ್ ಮೆಂಟ್ ಶಸ್ತ್ರಕ್ರಿಯೆ ನಡೆಸುವ ಅಗತ್ಯವಿದೆ ಎಂದಿದ್ದರು. ಜೊತೆಗೆ ಆತನಿಗೆ ಮುಂದೆ ನಡೆದಾಡಲು ಸಾಧ್ಯವೇ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ಭವಿಷ್ಯದ ಖರ್ಚುವೆಚ್ಚಗಳ ಬಗ್ಗೆ ಚಿಂತಾಕ್ರಾಂತರಾದ ಊರ್ವಶಿ ತನ್ನ ನರ್ಸರಿ ಶಾಲಾ ಶಿಕ್ಷಕಿ ಹುದ್ದೆ ತೊರೆದು ಈ ತಳ್ಳು ಆಹಾರ ಗಾಡಿ ನಡೆಸಲು ತೀರ್ಮಾನಿಸಿದ್ದರು.

ಸದ್ಯದ ಮಟ್ಟಿಗೆ ಖರ್ಚುವೆಚ್ಚದ ಸಮಸ್ಯೆಯಿಲ್ಲದಿದ್ದರೂ ಭವಿಷ್ಯದ ಬಗ್ಗೆ ಆಕೆಗೆ ಚಿಂತೆಯಿದೆ, ಆ ಚಿಂತೆಯೇ ಆಕೆಗೆ ಈ ಉದ್ಯೋಗ ಆರಿಸುವಂತೆ ಮಾಡಿದೆ. ಆಕೆಯ ಪತಿ ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆಯೊಂದರಲ್ಲಿ ಅಧಿಕಾರಿಯಾಗಿದ್ದರೆ, ಮಾವ ವಾಯುಪಡೆಯ ನಿವೃತ್ತ ಕಮಾಂಡರ್ ಆಗಿದ್ದರು.
ಆಕೆಯ 12 ವರ್ಷದ ಪುತ್ರಿ ನಂದಿನಿ ಬ್ಲೂ ಬೆಲ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಳೆ ಹಾಗೂ 7 ವರ್ಷದ ಪುತ್ರ ಯತೀಶ್ ಅಮೆರಿಕನ್ ಮಾಂಟೆಸ್ಸರಿ ಪಬ್ಲಿಕ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾನೆ. ಈ ಹಿಂದೆ 2010ರಲ್ಲಿ ಯೂನಿಟೆಕ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಆಕೆಯ ಪತಿ ಅಮಿತ್ ಕ್ರಿಕೆಟ್ ಆಡುವಾಗ ಬಲಗಾಲಿನ ಮೂಳೆ ಮುರಿತಕ್ಕೊಳಗಾಗಿ ಶಸ್ತ್ರಕ್ರಿಯೆಗೊಳಗಾಗಿದ್ದರು.

ಊವರ್ಶಿಯವರ ಗಾಡಿ ಆಹಾರ ಗುರ್‌ಗಾಂವ್ ವಾಸಿಗಳಲ್ಲಿ ಜನಪ್ರಿಯವಾಗಿದ್ದು, ಫೇಸ್‌ಬುಕ್ ಪುಟ ‘ಸೋಲ್ ಸ್ಟರ್ರಿಂಗ್ಸ್ ಬಯ ಸುನಾಲಿ’ಯಲ್ಲಿಯೂ ಅವರ ಬಗ್ಗೆ ಬರೆಯಲಾಗಿದ್ದು ಈ ಪೇಜಿಗೆ 27,000 ಲೈಕ್‌ಗಳು ಸಿಕ್ಕಿದ್ದರೆ 9,000 ಮಂದಿ ಅದನ್ನು ಶೇರ್ ಮಾಡಿದ್ದಾರೆ.

ಪದವೀಧರೆಯಾಗಿರುವ ಊರ್ವಶಿ ತಾನು ತನ್ನ ಈ ಮೊಬೈಲ್ ಫುಡ್‌ಸ್ಟಾಲ್‌ನಿಂದ ದಿನವೊಂದಕ್ಕೆ 2,500 ರೂ.ಗಳಿಂದ 3,000 ರೂ. ತನಕ ಪಡೆಯುತ್ತೇನೆ ಎಂದು ಹೇಳುತ್ತಾರಲ್ಲದೆ ಮುಂದೆ ಟ್ರಕ್ ಖರೀದಿಸುವ ಅಥವ ರೆಸ್ಟೋರೆಂಟ್ ತೆರೆಯುವ ಯೋಚನೆಯೂ ಅವರಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News