×
Ad

ಸಂಕಷ್ಟದಲ್ಲಿರುವ ಭಾರತೀಯ ಕಾರ್ಮಿಕರಿಗೆ ಸೌದಿ ರಾಜಕುಮಾರನಿಂದ ನೆರವು: ಸುಶ್ಮಾ ಸ್ವರಾಜ್

Update: 2016-08-04 15:04 IST

ಹೊಸದಿಲ್ಲಿ, ಆ.4: ‘‘ಗಲ್ಫ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಭಾರತೀಯ ಕಾರ್ಮಿಕರಿಗೆ ನೆರವು ನೀಡುವಂತೆ ಸೌದಿ ಅರೇಬಿಯಾ ರಾಜಕುಮಾರ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’’ ಎಂದು ವಿದೇಶಾಂಗ ಖಾತೆಯ ಸಚಿವೆ ಸುಶ್ಮಾ ಸ್ವರಾಜ್ ರಾಜ್ಯಸಭೆಗೆ ಗುರುವಾರ ತಿಳಿಸಿದ್ದಾರೆ.

‘‘ಎರಡೇ ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಸೌದಿ ರಾಜಕುಮಾರ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜನರಲ್ ವಿ.ಕೆ. ಸಿಂಗ್ ಸೌದಿಯಲ್ಲಿದ್ದಾರೆ. ನಿನ್ನೆ(ಬುಧವಾರ) ಅಲ್ಲಿನ ಕಾರ್ಮಿಕ ಸಚಿವರನ್ನು ಭೇಟಿಯಾಗಿದ್ದಾರೆ. ಭಾರತೀಯ ಕಾರ್ಮಿಕರಿಗೆ ನಿರ್ಗಮನ ವೀಸಾ ನೀಡಲು ಸೂಚಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಸೌದಿ ತನ್ನದೇ ವಿಮಾನದಲ್ಲಿ ತನ್ನದೇ ಖರ್ಚಿನಲ್ಲಿ ಕಾರ್ಮಿಕರನ್ನು ಭಾರತಕ್ಕೆ ಕಳುಹಿಸಿಕೊಡಲಿದೆ. ಕೆಲವರು ಅಲ್ಲೆ ಸೂಕ್ತ ಕೆಲಸ ಹುಡುಕಿಕೊಂಡರೆ ಬೇರೊಂದು ಕೆಲಸವಿದ್ದರೆ ಅಲ್ಲಿಯೇ ಉಳಿಯಲು ಸೌದಿ ಆಡಳಿತ ಅನುಮತಿ ನೀಡಿದೆ ರಾಜ್ಯಸಭೆಗೆ ಸುಶ್ಮಾ ತಿಳಿಸಿದ್ದಾರೆ.

ಕಾರ್ಮಿಕರಿಗೆ ಸಂಬಳ ಬಾಕಿ ಇರುವ ಬಗ್ಗೆ ಪ್ರತಿಕ್ರಿಯಿಸಿದ ಸುಶ್ಮಾ ಸ್ವರಾಜ್, ಎಲ್ಲ ಕಾರ್ಮಿಕರು ತಮ್ಮ ಬಾಕಿ ಮೊತ್ತ ಎಷ್ಟಿದೆ ಎಂದು ಕಾರ್ಮಿಕ ಕಚೇರಿಯಲ್ಲಿ ತಿಳಿಸಬೇಕು. ಅಲ್ಲಿಯೇ ಎಲ್ಲವೂ ಇತ್ಯರ್ಥವಾದ ಬಳಿಕ ದೇಶಕ್ಕೆ ವಾಪಸಾಗಬಹುದು ಎಂದರು.

ಭಾರತೀಯರು ನೆಲೆಸಿರುವ ಶಿಬಿರಗಳಲ್ಲಿ ಸೌದಿ ಆಡಳಿತ ಆಹಾರ ವೈದ್ಯಕೀಯ ಉಪಚಾರವಲ್ಲದೆ ಇನ್ನಿತರ ಸಹಾಯವನ್ನು ವ್ಯವಸ್ಥೆ ಮಾಡಿದೆ. ಭಾರತೀಯರಿಗೆ ನೆರವು ನೀಡಲು ಮುಂದಾಗಿರುವ ಸೌದಿ ದೊರೆಗೆ ಭಾರತ ಹಾಗೂ ಸದನದ ಪರವಾಗಿ ಕೃತಜ್ಞತೆ ಸಲ್ಲಿಸುವೆ. ಇತ್ತೀಚೆಗೆ ಸೌದಿಗೆ ಭೇಟಿ ನೀಡಿ ಆ ದೇಶದೊಂದಿಗಿನ ಸಂಬಂಧವನ್ನು ಮತ್ತಷ್ಟು ಉತ್ತಮಪಡಿಸಿದ್ದ ಪ್ರಧಾನಮಂತ್ರಿಗಳಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಸುಶ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News