ಬಿಹಾರ ಟಾಪರ್ ಹಗರಣ: ವಿಜ್ಞಾನ ರ್ಯಾಂಕ್ ವಿಜೇತನ ಬಂಧನ
ಬಿಹಾರ,ಆಗಸ್ಟ್ 4: ಬಿಹಾರದ 12ನೆ ತರಗತಿಯ ವಿಜ್ಞಾನ ಮತ್ತು ಕಲಾವಿಭಾಗದ ಪರೀಕ್ಷಾ ಫಲಿತಾಂಶದಲ್ಲಿನ ಅಕ್ರಮ ಪ್ರಕರಣದಲ್ಲಿ(ಟಾಪರ್ ಹಗರಣ) ವಿಜ್ಞಾನದ ವಿಭಾಗದಲ್ಲಿ 3ನೆ ರ್ಯಾಂಕ್ ಪಡೆದ ಬಿಷ್ಣುರಾಯ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಪಾಟ್ನಾ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಸೈಟಿ) ನಿನ್ನೆ ಬಂಧಿಸಿದೆ ಎಂದು ಕೊಬ್ರಾಪೋಸ್ಟ್ ವರದಿಮಾಡಿದೆ.
ವಿದ್ಯಾರ್ಥಿ ರಾಹುಲ್ ಕುಮಾರ್‌ನನ್ನು ಆಝಂಪುರ ಗ್ರಾಮದಲ್ಲಿರುವ ಅವನ ಮಾವದುರ್ಗೇಶ್ ಸಿಂಗ್‌ರ ಮನೆಯಿಂದನಿನ್ನೆ ಎಸ್ಸೈಟಿ ಸೆರೆಹಿಡಿದಿದ್ದು, ಕೋರ್ಟ್ ಅವನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ನಗರ ಎಸ್ಪಿ ಹಾಗೂ ಎಸ್ಸೈಟಿ ಸದಸ್ಯರಾದ ಚಂದನ್ ಕುಶ್ವಾಹ ತಿಳಿಸಿದ್ದಾರೆ. ರ್ಯಾಂಕ್‌ಗೆ ಐದು ಲಕ್ಷ ರೂಪಾಯಿ ವ್ಯವಹಾರ ಕುದುರಿಸಿದ ಆಪಾದನೆ ವಿದ್ಯಾರ್ಥಿಯ ಮೇಲೆ ಹೊರಿಸಲಾಗಿದೆ. ಬಿಷ್ಣುರಾಯ್ ಕಾಲೇಜಿನ ನಾಲ್ವರು ರ್ಯಾಂಕ್ ವಿಜೇತರಲ್ಲಿ ರಾಹುಲ್ ಕುಮಾರ್ ಒಬ್ಬ. ಶಾಲಿನಿ ರಾಯ್, ಸೌರವ್ ಶ್ರೇಷ್ಠ್ ಮತ್ತು ರೂಬಿರಾಯ್ ಉಳಿದ ಮೂವರಾಗಿದ್ದು ಇವರಲ್ಲಿ ಶಾಲಿನಿರಾಯ್ ಮತ್ತು ಸೌರವ್ ಶ್ರೇಷ್ಠ್‌ರು ಪೊಲೀಸರಿಗೆ ಸೆರೆಯಾಗಿಲ್ಲ ಎನ್ನಲಾಗಿದೆ.
ಆರ್ಟ್ಸ್ ವಿಭಾಗದಲ್ಲಿ ವಿವಾದಾಸ್ಪದ ಟಾಪರ್ ಆಗಿದ್ದ ರೂಬಿರಾಯ್‌ಳನ್ನು ಕಳೆದ ಜೂನ್‌ನಲ್ಲಿ ಎಸ್ಸೈಟಿ ಬಂಧಿಸಿತ್ತು. ಪೊಲಿಟಿಕಲ್ ಸೈನ್ಸನ್ನು ಪೊಡಿಕಲ್ ಸೈನ್ಸ್ ಎಂದು ಹೇಳಿ ರೂಬಿ ವಿವಾದ ಹುಟ್ಟುಹಾಕಿದ್ದಳು. ಸೋಮವಾರ ಇಲ್ಲಿನ ಸ್ಥಳೀಯ ನ್ಯಾಯಾಲಯ ರೂಬಿರಾಯ್‌ಗೆ ಜಾಮೀನು ನೀಡಿದೆ. ಮಾಜಿ ಬಿಎಸ್‌ಇಬಿ ಅಧ್ಯಕ್ಷ ಲಾಲ್ಕೇಶ್ವರ್ ಪ್ರಸಾದ್ ಸಿಂಗ್, ಅವರ ಪತ್ನಿ ಮಾಜಿ ಶಾಸಕಿ ಉಶಾ ಸಿನ್ಹಾ, ವಿಷ್ಣುರಾಯ್ ಕಾಲೇಜಿನ ಕಾರ್ಯದರ್ಶಿ-ಕೋಂ ಪ್ರಾಂಶುಪಾಲ ಬಚ್ಚಾರಾಯ್ ಮತ್ತು ಸುಮಾರು ಮೂರು ಡಝನ್‌ನಷ್ಟು ಆರೋಪಿಗಳನ್ನು ಈವರೆಗೆ ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಕೋಬ್ರಪೋಸ್ಟ್ ವರದಿ ತಿಳಿಸಿದೆ.