×
Ad

ಮುಂದಿನ ವರ್ಷ ಜಿಎಸ್‌ಟಿ ಜಾರಿಯ ಗುರಿ: ಜೇಟ್ಲಿ

Update: 2016-08-04 18:53 IST

ಹೊಸದಿಲ್ಲಿ, ಆ.4: ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ರಾಜ್ಯಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆತ ಬಳಿಕ, ಸರಕಾರವೀಗ ಹಲವು ಪರೋಕ್ಷ ತೆರಿಗೆಗಳನ್ನು ಪರ್ಯಾಯಗೊಳಿಸುವ ಏಕೀಕೃತ ರಾಷ್ಟ್ರೀಯ ತೆರಿಗೆಯನ್ನು 2017ರ ಎ.1ರ ಗುರಿಯೊಳಗೆ ಜಾರಿಗೊಳಿಸುವ ಪ್ರಯತ್ನವನ್ನು ತೀವ್ರಗೊಳಿಸಿದೆ.
ಮುಂದಿನ 30 ದಿನಗೊಳೊಳಗಾಗಿ 16 ರಾಜ್ಯಗಳ ಜಿಎಸ್‌ಟಿಗೆ ಅನುಮೋದನೆ ನೀಡಬಹುದೆಂಬ ನಿರೀಕ್ಷೆ ಸರಕಾರದ್ದಾಗಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಜಿಎಸ್‌ಟಿಯ ಜಾರಿ ಮಾರ್ಗ ನಕ್ಷೆಯನ್ನು ಮುಂದಿರಿಸಿದ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಈ ವಿಷಯ ತಿಳಿಸಿದರು.
ನಿಗದಿತ ಗುರಿಯೊಳಗೆ ಇದನ್ನು ಸಾಧಿಸುವ ಭರವಸೆ ತಮಗಿದೆ. ಒಂದು ಖಚಿತ ಗುರಿಯನ್ನಿರಿಸಿಕೊಳ್ಳುವುದು ಯಾವಾಗಲೂ ಒಳ್ಳೆಯದು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಿಜಿಎಸ್‌ಟಿ ಹಾಗೂ ಐಜಿಎಸ್‌ಟಿಗಳನ್ನು ಜಾರಿಗೊಳಿಸುವುದರೊಂದಿಗೆ ಸಂಬಂಧಿತ ಮಸೂದೆಗಳನ್ನು ತರುವ ಆಶಾವಾದ ತನಗಿದೆಯೆಂದು ಜೇಟ್ಲಿ ಹೇಳಿದರು.
ಜಿಎಸ್‌ಟಿಯ ದರದ ಕುರಿತು ಮಾತನಾಡಿದ ಅವರು, ಜಿಎಸ್‌ಟಿ ಸಲಹಾ ಮಂಡಳಿ ಆ ಕುರಿತು ನಿರ್ಧರಿಸಲಿದೆ. ಕಂದಾಯ ಅಗತ್ಯಗಳು ಹಾಗೂ ತೆರಿಗೆ ದರವನ್ನು ಕನಿಷ್ಠವಾಗಿರಿಸುವ ಅಗತ್ಯವನ್ನು ಗಮನದಲ್ಲಿರಿಸಿ ಅದು ಸಂತುಲಿತ ದರವನ್ನು ನಿರ್ಧರಿಸಲಿದೆ. ಜಿಎಸ್‌ಟಿ ದರವನ್ನು ಅನುಕೂಲಕರವಾಗಿರಿಸುವುದು ತಮ್ಮ ಉದ್ದೇಶವಾಗಿದೆ ಎಂದರು.
ಜಿಎಸ್‌ಟಿ ಶೇ.18ನ್ನು ಮೀರಬಾರದೆಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಜಿಎಸ್‌ಟಿ ಭಾರತದಲ್ಲಿ ವ್ಯಾಪಾರ ಮಾಡುವುದನ್ನು ಸುಲಭವಾಗಿಸುತ್ತದೆ ಹಾಗೂ ವಿಶಾಲವಾದ ವ್ಯಾಪಾರಿ ಹಾಗೂ ನಾಗರಿಕ ಸಮುದಾಯಕ್ಕೆ ಸಹಾಯ ಮಾಡುತ್ತದೆ. ಮಸೂದೆ ವಿಳಂಬದ ಕುರಿತಿದ್ದ ಸಾರ್ವಜನಿಕ ಕಳವಳ ಈಗ ಅಂತ್ಯಗೊಂಡಿದೆ. ಡಿಸೆಂಬರ್‌ನೊಳಗೆ ಜಿಎಸ್‌ಟಿಗೆ ಅಗತ್ಯವಿರುವ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಪರೀಕ್ಷಿಸಲ್ಪಟ್ಟು ಸಿದ್ಧವಾಗಲಿದೆ. ಭಾರತಾದ್ಯಂತದ 60 ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ತರಬೇತಿಗೊಳಿಸಲಾಗುವುದು. ವ್ಯಾಪಾರಿಗಳು ಹಾಗೂ ಕೈಗಾರಿಕೆಗಳಿಗೆ ಜಿಎಸ್‌ಟಿಯನ್ನು ಅರ್ಥೈಸಲು ವ್ಯಾಪಕ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಲಾಗುವುದೆಂದು ಅಧಿಯಾ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News