ಕೇರಳ: ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಕದತಟ್ಟಿದ ಬಾಲಕೃಷ್ಣ ಪಿಳ್ಳೆ
ಕೊಟ್ಟಾರಕರ, ಆ.6: ಆಝಾನ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆನ್ನಲಾದ ಕೇರಳ ಕಾಂಗ್ರೆಸ್ (ಬಿ) ಮುಖಂಡ ಬಿ.ಬಾಲಕೃಷ್ಣ ಪಿಳ್ಳೆ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟಿನ ಕದ ತಟ್ಟಲಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಪೊಲೀಸರು ಪಿಳ್ಳೆಯ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿರುವುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ . ಆ ನಂತರ ಪಿಳ್ಳೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆಯುವ ಕುರಿತು ಚಿಂತನೆ ನಡೆಸಿದ್ದಾರೆ ಹಾಗೂ ಕಾನೂನು ತಜ್ಞರೊಂದಿಗೆ ಅವರು ಸಮಾಲೋಚನೆ ನಡೆಸಿದ್ದು ಅದು ಅಂತಿಮ ಹಂತದಲ್ಲಿದೆ ಎಂದು ವರದಿ ತಿಳಿಸಿದೆ. ಹೈಕೋರ್ಟ್‌ನ ಪ್ರಮುಖ ವಕೀಲರೊಬ್ಬರು ಪಿಳ್ಳೆಯ ಪರ ಹೈಕೋರ್ಟ್‌ನಲ್ಲಿ ಹಾಜರಾಗಲಿದ್ದಾರೆ. ಪಿಳ್ಳೆಯ ಹೇಳಿಕೆಯನ್ನು ಹೈಕೋರ್ಟ್ ತೀರ್ಮಾನದ ನಂತರವೇ ಪಡೆಯಲು ಪೊಲೀಸರಿಂದ ಸಾಧ್ಯ ಎನ್ನಲಾಗಿದೆ.
ಈ ನಡುವೆ ಪಿಳ್ಳೆಯನ್ನು ಕೂಡಲೇ ವಿಚಾರಣೆಗೆ ಗುರಿಪಡಿಸಬೇಕು. ಅವರನ್ನು ಬಂಧಿಸಬೇಕೆಂದು ಪೊಲೀಸರ ಮೇಲೆ ಒತ್ತಡ ಹೆಚ್ಚುತಿದ್ದು ಶುಕ್ರವಾರ ಮುಸ್ಲಿಮ್ ಧರ್ಮ ಬೋಧಕರ ಸಭೆಯೊಂದು ಕೊಟ್ಟಾರಕರದಲ್ಲಿ ನಡೆದಿತ್ತು. ಆಸಭೆಯು ಈ ಬೇಡಿಕೆಯನ್ನು ಎತ್ತಿವೆ ಎಂದು ತಿಳಿದು ಬಂದಿದೆ. ಪಿಳ್ಳೆ ಕ್ಷಮೆ ಯಾಚಿಸಬೇಕಾದ ವಿಷಯ ಇದಲ್ಲ ಎಂಬ ವಾದ ಸಭೆಯಲ್ಲಿ ಕೇಳಿಬಂದಿತ್ತು. ಪಿಳ್ಳೆ, ತನ್ನ ಭಾಷಣಕ್ಕೆ ವಿವಾದಾಂಶಗಳನ್ನು ಸೇರಿಸಿ ತನ್ನನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಚಿತ್ರಿಸುವ ಸಂಚು ನಡೆದಿದೆ ಎಂಬ ನಿಲುವಿನಲ್ಲಿ ದೃಢವಾಗಿ ನಿಂತಿದ್ದಾರೆ. ಹೈಕೋರ್ಟ್‌ನ್ನು ಸಂಪರ್ಕಿಸಿದ ಬಳಿಕ ತನ್ನ ಮುಂದಿನ ನಿಲುವನ್ನು ಅವರು ಬಹಿರಂಗಪಡಿಸುವರು ಎಂದು ವರದಿ ವಿವರಿಸಿದೆ.