×
Ad

ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸಿ ಬಾಲಕನನ್ನು ಬಲಿ ತೆಗೆದುಕೊಂಡ ಉಪನ್ಯಾಸಕಿ

Update: 2016-08-06 15:42 IST

ಹೊಸದಿಲ್ಲಿ, ಆ.6: ದಿಲ್ಲಿ ವಿಶ್ವವಿದ್ಯಾನಿಲಯದ ಅಧೀನದ ಭಗಿನಿ ನಿವೇದಿತಾ ಕಾಲೇಜಿನ ಸಹಾಯಕ ಉಪನ್ಯಾಸಕಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ವೇಗವಾಗಿ ಕಾರು ಚಲಾಯಿಸಿ 11 ವರ್ಷದ ಶಾಲಾ ಬಾಲಕನನ್ನು ಬಲಿ ಪಡೆದ ಘಟನೆ ರಾಜಧಾನಿಯ ನಜಫ್‌ಘರ್ ಪ್ರದೇಶದಿಂದ ವರದಿಯಾಗಿದೆ.

ಅಪಘಾತ ನಡೆಸಿದ ಉಪನ್ಯಾಸಕಿಯನ್ನು ಅನುಪಮಾ ಅಗರ್ವಾಲ್ ಎಂದು ಗುರುತಿಸಲಾಗಿದೆ. ಮೃತ ಬಾಲಕ ನಿತೇಶ್(11) ನಜಫ್ ಘರ್ ಸರಕಾರಿ ಶಾಲೆಯ ಆರನೆ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಅನುಪಮಾ ಮೊದಲು ತನ್ನ ಕಾರನ್ನು ಬಾಲಕನ ಸೈಕಲ್ಲಿಗೆ ಢಿಕ್ಕಿ ಹೊಡೆದಿದ್ದು ನಂತರ ಬಾಲಕ ತನ್ನ ಕಾರಿನ ಚಕ್ರದಡಿಯಲ್ಲಿದ್ದಾನೆಂಬ ವಿಚಾರ ತಿಳಿಯದೆಯೇ ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿ ಬಾಲಕನ ದೇಹದ ಮೇಲೆ ಮತ್ತೊಮ್ಮೆ ಕಾರನ್ನು ಹರಿಸಿದ್ದಳು. ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೂ ಸ್ಥಳೀಯರು ಆಕೆಯನ್ನು ಹಿಡಿಯುವಲ್ಲಿ ಸಫಲರಾಗಿದ್ದರು.

ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಕೆಯ ವಾಹನದಲ್ಲಿಯೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಉಪನ್ಯಾಸಕಿ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರಲ್ಲದೆ, ಬಾಲಕನ ಹೆತ್ತವರ ಆಕ್ರೋಶದ ನಡುವೆಯೂ ಆತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಉಪನ್ಯಾಸಕಿಯನ್ನು ಬಂಧಿಸಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಬಾಲಕ ರೋಶನ್‌ಪುರ ನಿವಾಸಿಯಾಗಿದ್ದು ಆತನ ತಂದೆ ಮುಕೇಶ್ ಮಾನ್ ಅವರ ಒಂದು ಕಾಲ ಊನವಾಗಿದ್ದು ಪೈಂಟಿಂಗ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News