×
Ad

ಕಾಶ್ಮೀರ: ಅನಂತನಾಗ್,ಶೋಪಿಯಾನ್‌ಗಳಲ್ಲಿ ಘರ್ಷಣೆ : ಹಲವೆಡೆ ಕರ್ಫ್ಯೂ ಜಾರಿ

Update: 2016-08-06 18:56 IST

ಶ್ರೀನಗರ,ಆ.6: ದಕ್ಷಿಣ ಕಾಶ್ಮೀರದ ಅನಂತನಾಗ್ ಮತ್ತು ಶೋಪಿಯಾನ ಜಿಲ್ಲೆಗಳಲ್ಲಿ ಶನಿವಾರ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ನಡೆದಿವೆ. ಕಣಿವೆಯ ಹೆಚ್ಚಿನ ಭಾಗಗಳಲ್ಲಿ ಕರ್ಫ್ಯೂ ಮುಂದುವರಿದಿದ್ದು, ಸತತ 29ನೇ ದಿನವೂ ಸಾಮಾನ್ಯ ಜನಜೀವನಕ್ಕೆ ವ್ಯತ್ಯಯವುಂಟಾಗಿತ್ತು.
ಅನಂತನಾಗ್ ಜಿಲ್ಲೆಯ ಚೀ ಎಂಬಲ್ಲಿ ಪ್ರತಿಭಟನಾಕಾರರು ರ್ಯಾಲಿ ನಡೆಸಿದ ಸಂದರ್ಭ ಹಿಂಸಾಚಾರ ಭುಗಿಲ್ಲೆದ್ದ ಪರಿಣಾಮ 21 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಶೋಪಿಯಾನ್‌ನ ಹರ್ಪೋರಾದಲ್ಲಿ ಪ್ರತಿಭಟನಾಕಾರರು ಪೊಲೀಸ್ ಚೌಕಿಯೊಂದರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಶುಕ್ರವಾರ ಕಣಿವೆಯ ಕೆಲವೆಡೆಗಳಲ್ಲಿ ಹೊಸದಾಗಿ ಹಿಂಸಾಚಾರ ನಡೆದು ಮೂವರು ಸಾವನ್ನಪ್ಪಿ,150ಕ್ಕೂ ಅಧಿಕ ಜನರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಜನರ ಚಲನವಲನಗಳ ಮೇಲಿನ ನಿರ್ಬಂಧ ಶನಿವಾರವೂ ಮುಂದುವರಿದಿತ್ತು.
ಶ್ರೀನಗರ ಸೇರಿದಂತೆ ಕಣಿವೆಯಲ್ಲಿ ವಿವಿಧ ಭಾಗಗಳಲ್ಲಿ ಕರ್ಫ್ಯೂ ಮುಂದುವರಿದಿದ್ದು, ಉಳಿದೆಡೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ.
ಜು.8ರಂದು ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಗಳಲ್ಲಿ 53 ಜನರು ಸಾವನ್ನಪ್ಪಿದ್ದು, 6,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
 ಅಧಿಕಾರಿಗಳು ಹೇರಿರುವ ನಿರ್ಬಂಧಗಳು ಮತ್ತು ಪ್ರತ್ಯೇಕತಾವಾದಿ ಪ್ರಾಯೋಜಿತ ಮುಷ್ಕರದಿಂದಾಗಿ ಸಾಮಾನ್ಯ ಜನಜೀವನ ವ್ಯತ್ಯಯಗೊಂಡಿದೆ. ಶಾಲಾ -ಕಾಲೇಜುಗಳು,ಅಂಗಡಿ-ಮುಂಗಟ್ಟುಗಳು,ಪೆಟ್ರೋಲ್ ಬಂಕ್‌ಗಳು,ಬ್ಯಾಂಕುಗಳು ಮತ್ತು ಖಾಸಗಿ ಕಚೇರಿಗಳು ಮುಚ್ಚಲ್ಪಟ್ಟಿದ್ದು, ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿದಿಲ್ಲ. ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಹಾಜರಾತಿಯೂ ವಿರಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಡೀ ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಅಂತರ್ಜಾಲ ಕಡಿತ ಮುಂದುವರಿದಿದ್ದು, ಪ್ರಿಪೇಡ್ ಸಂಪರ್ಕಗಳಲ್ಲಿ ಹೊರಹೋಗುವ ಕರೆಗಳನ್ನು ನಿಷೇಧಿಸಲಾಗಿದೆ. ಪ್ರತ್ಯೇಕತಾವಾದಿ ಪಾಳಯವು ಕಾಶ್ಮೀರದಲ್ಲಿ ಬಂದ್ ಕರೆಯನ್ನು ಆ.12ರವರೆಗೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News