ವೈಷ್ಣೋದೇವಿ ಮಾರ್ಗದಲ್ಲಿ ಭೂ ಕುಸಿತ
ಜಮ್ಮು, ಆ. 6: ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಬೆಂಗಳೂರು ನಿವಾಸಿ ಸೇರಿದಂತೆ ವೈಷ್ಣೋದೇವಿಗೆ ಹೋಗುತ್ತಿದ್ದ ನಾಲ್ವರು ಸಾವಿಗೀಡಾಗಿದ್ದು, ಇತರ 9 ಮಂದಿ ಗಾಯಗೊಂಡಿದ್ದಾರೆ. ಬನಗಂಗಾ ಅರ್ಧಕುವರಿ ರಸ್ತ್ತೆಯಲ್ಲಿ ನಿನ್ನೆ ಮಧ್ಯ ರಾತ್ರಿಯ ವೇಳೆ ಈ ಭೂ ಕುಸಿತ ಸಂಭವಿಸಿದ್ದು, ಯಾತ್ರಿಕರು ಕುಳಿತಿದ್ದ ಗುಡಾರವೊಂದರ ಮೇಲೆ ಅವಶೇಷಗಳು ಬಿದ್ದವು. ಐದರ ಹರೆಯದ ಬಾಲಕನೊಬ್ಬನ ಸಹಿತ ಮೂವರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ಆಸ್ಪತ್ರೆಯ ಹಾದಿಯಲ್ಲಿ ಕೊನೆಯುಸಿರೆಳೆದನೆಂದು ಶ್ರೀಮಾತಾ ವೈಷ್ಣೋದೇವಿ ಮಂದಿರ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜೀತ್ ಸಾಹು ಪಿಟಿಐಗೆ ತಿಳಿಸಿದ್ದಾರೆ.
ಬಲಿಯಾದವರನ್ನು ಬೆಂಗಳೂರಿನ ಶಶಿಧರ ಕುಮಾರ್ (29), ಛತ್ತೀಸ್‌ಗಡದ ಬಿಂದು ಸಾಹ್ನಿ (30) ಮತ್ತಾಕೆಯ 5ರ ಹರೆಯದ ಪುತ್ರ ವಿಶಾಲ್ ಹಾಗೂ ರೆಯಾಸಿಯ ಘೋಡಾವಾಲಾ ಸಾದಿಕ್(32) ಎಂದು ಗುರುತಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಗಾಯಾಳುಗಳಲ್ಲಿ ಬೆಂಗಳೂರಿನ ಪಾರಸ್(8) ಹಾಗೂ ಸಂತೋಷ್(28) ಎಂಬವರು ಸೇರಿದ್ದಾರೆ.