ಷೇರು ಮಾರುಕಟ್ಟೆ – 30 ಲಕ್ಷ ರೂ. ಪಂಗನಾಮ : ಪೊಲೀಸ್, ಮಹಿಳೆಯ ಬಂಧನ
ಪಂದಳಂ, ಆ.7: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚುಲಾಭ ಸಿಗುತ್ತದೆ ಎಂದು ಹಲವರನ್ನು ನಂಬಿಸಿ ಮೂವತ್ತು ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಮತ್ತು ಆತನ ಸಹಾಯಕಿ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದ ಪಂದಳಂ ಎಂಬಲ್ಲಿಂದ ವರದಿಯಾಗಿದೆ.
ಆಲಪ್ಪುಝ ಕೈನಡಿ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ತಾಮರಕ್ಕುಳಂ ಫಾಝಿಲ್ ಮಂಝಿಲ್‌ನ ಫಝಲ್‌ಖಾನ್(47), ಪಂದಳಂನಲ್ಲಿ ಬಾಡಿಗೆಮನೆಯಲ್ಲಿ ವಾಸಿಸುವ ಮಾವೇಲಿಕರ ರಂಜು(31) ಬಂಧಿಸಲಾದ ಆರೋಪಿಗಳು.
ಕೋರ್ಟ್‌ನಲ್ಲಿ ಆರೋಪಿಗಳಿಬ್ಬರನ್ನೂ ಹಾಜರು ಪಡಿಸಲಾಗಿದ್ದು ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ. ಪಂದಳಂನ ಪುಷ್ಪವಲ್ಲಿ ಎಂಬವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿ ಸಿ ತನಿಖೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸಿದ ಸುದ್ದಿ ತಿಳಿದು ಇತರ ಏಳು ಮಂದಿ ಇವರಿಬ್ಬರ ವಿರುದ್ಧ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
2015 ಡಿಸೆಂಬರ್‌ನ ನಂತರ ಇಬ್ಬರೂ ಸೇರಿ ಸಾಮಾನ್ಯ ಮಹಿಳೆಯರಿಂದ ಷೇರ್ ಮಾರ್ಕೆಟ್‌ಗೆ ಹಣ ತೊಡಗಿಸಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿ ಹಣವನ್ನು ಸಂಗ್ರಹಿಸಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆಂದು ವರದಿ ತಿಳಿಸಿದೆ.