ಮೊಬೈಲ್ ವಿಕಿರಣ ಅಪಾಯದಿಂದ ಸುರಕ್ಷತೆಗೆ ಆರೆಸ್ಸೆಸ್ ನಾಯಕರ ವಿನೂತನ ಐಡಿಯಾ!
ಆಗ್ರಾ,ಆ.7: ಮೊಬೈಲ್ ವಿಕಿರಣ ಅಪಾಯದಿಂದ ಸುರಕ್ಷತೆಗೆ ಆರೆಸ್ಸೆಸ್ ನಾಯಕರ ವಿನೂತನ ಐಡಿಯಾ ಏನು ಗೊತ್ತೇ? ಮೊಬೈಲ್ ಹಿಂಭಾಗಕ್ಕೆ ಸೆಗಣಿ ಬಳಿಯುವುದು. ವಿಚಿತ್ರವಾದರೂ ಸತ್ಯ!
ಆಗ್ರಾ ಹಾಗೂ ಮಥುರಾ ಭೇಟಗೆ ಆಗಮಿಸಿದ್ದ ಆರ್‌ಎಸ್‌ಎಸ್ ಅಖಿಲ ಭಾರತೀಯ ಗೋಸೇವಾ ಪ್ರಮುಖ ಶಂಕರ್‌ಲಾಲ್ (76) ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದರು.
ಅವರ ಮೊಬೈಲ್‌ನ ಹಿಂಭಾಗಕ್ಕೆ ಸೆಗಣಿ ಮೆತ್ತಿದ ಬಗ್ಗೆ ಗಮನ ಸೆಳೆದಾಗ, ಇದು ಹಸುವಿನ ತಾಜಾ ಸೆಗಣಿ. ಮೊಬೈಲ್‌ನ ಅಪಾಯಕಾರಿ ವಿಕಿರಣ ತಡೆಯುವ ಸಲುವಾಗಿ ನಾನು ಇದನ್ನು ಅನುಸರಿಸುತ್ತೇನೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆ. ನನ್ನನ್ನು ನಂಬಿ ಎಂದು ಹೇಳಿದರು.
ಜನ ಮೊಬೈಲ್ ಕವರ್ ಚೇಂಜ್ ಮಾಡಿದಂತೆ ಸೆಗಣಿ ಬದಲಿಸುತ್ತಲೇ ಇರುತ್ತೀರಾ ಎಂದು ಪ್ರಶ್ನಿಸಿದಾಗ, ಗೋವು ನಮ್ಮತಾಯಿ.ಇದರ ಮೂತ್ರ ಹಾಗೂ ಸೆಗಣಿಗೆ ನಮ್ಮನ್ನು ರೋಗದಿಂದ ರಕ್ಷಿಸುವ ಶಕ್ತಿ ಇದೆ. ಸೆಗಣಿ ಕ್ಯಾನ್ಸರ್ ತಡೆಯುತ್ತದೆ ಎಂದಾದರೆ, ಮೊಬೈಲ್ ವಿಕಿರಣ ಪರಿಣಾಮದಿಂದ ನಮ್ಮನ್ನು ಏಕೆ ತಡೆಯುವುದಿಲ್ಲ ಎಂದು ಮರು ಪ್ರಶ್ನೆ ಹಾಕಿದರು.
ಗೋಸೇವಾ ಸಮಿತಿಯ ಇತರರೂ ಇದನ್ನು ಅನುಸರಿಸುತ್ತಾರೆಯೇ ಎಂದು ಕೇಳಿದಾಗ, ಎಲ್ಲ ಸದಸ್ಯರನ್ನು ನಿಮ್ಮ ಮೊಬೈಲ್ ತೋರಿಸಿ ಎಂದು ಸೆಗಣಿ ಇದ್ದ ಮೊಬೈಲ್‌ಗಳನ್ನು ಪ್ರದರ್ಶಿಸಿದರು.