8 ರೋಗಗ್ರಸ್ಥ ಸರಕಾರಿ ಕಂಪೆನಿಗಳನ್ನು ಮುಚ್ಚುವಂತೆ ನೀತಿ ಆಯೋಗದ ಸಲಹೆ
ಹೊಸದಿಲ್ಲಿ, ಆ.7: ರೋಗಗ್ರಸ್ಥ ಸರಕಾರಿ ಕಂಪೆನಿಗಳ ಸ್ಥಿತಿಗತಿಯ ಬಗ್ಗೆ ಪರಿಶೀಲಿಸುವ ಹೊಣೆಯನ್ನು ಪ್ರಧಾನಿ ಕಚೇರಿ ಒಪ್ಪಿಸಿದ್ದ, ಸರಕಾರಿ ಚಿಂತನ ಚಿಲುಮೆಯಾಗಿರುವ ನೀತಿ ಆಯೋಗವು, ಮುಚ್ಚಬೇಕಾದ 8 ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಗುರುತಿಸಿದೆ.
ನಷ್ಟದಲ್ಲಿರುವ 74 ಸರಕಾರಿ ಕಂಪೆನಿಗಳಲ್ಲಿ ಈ 8 ಘಟಕಗಳನ್ನು ಮುಚ್ಚಬೇಕು ಅಥವಾ ಮಾರಬೇಕೆಂದು ಆಯೋಗ ಹೇಳಿದೆಯೆಂದು ನಿಕಟ ಮೂಲಗಳು ತಿಳಿಸಿವೆ.
ಈ ಪ್ರಸ್ತಾವಕ್ಕೆ ಪ್ರಧಾನಿ ಕಾರ್ಯಾಲಯ ತಾತ್ವಿಕ ಅನುಮೋದನೆ ನೀಡಿದಲ್ಲಿ, ಈ ಸಾರ್ವಜನಿಕ ವಲಯ ಸಂಸ್ಥೆಗಳ (ಪಿಎಸ್‌ಯು) ಆಡಳಿತದ ಹೊಣೆ ಹೊತ್ತಿರುವ ಸಚಿವಾಲಯವು, ಈ ಕಂಪೆನಿಗಳ ಮುಚ್ಚಗಡೆಯ ಕುರಿತು ವಿವರವಾದ ಯೋಜನೆಯನ್ನು ಸಿದ್ಧಪಡಿಸಲಿದೆಯೆಂದು ಅವು ಹೇಳಿವೆ.
ಮಾರಾಟ ಮಾಡಬೇಕಾದ ಆಸ್ತಿಗಳನ್ನು ಗುರುತಿಸುವುದು ಹಾಗೂ ಆ ಸಂಸ್ಥೆಗಳ ನೌಕರರಿಗೆ ನೀಡಬೇಕಾದ ಪರಿಹಾರ ಇತ್ಯಾದಿಗಳು ವಿಸ್ತೃತ ಯೋಜನೆಯಲ್ಲಿ ಒಳಗೊಂಡಿರುತ್ತದೆ. ಈ ಕಂಪೆನಿಗಳನ್ನು ಬರ್ಖಾಸ್ತುಗೊಳಿಸುವ ಪ್ರಕ್ರಿಯೆ ಆರಂಭಿಸಲು, ಮುಚ್ಚುಗಡೆ ಯೋಜನೆಗಳನ್ನು ಅನುಮೋದನೆಗಾಗಿ ಕೇಂದ್ರ ಸಂಪುಟದ ಮುಂದೆ ಇರಿಸಲಾಗುವುದೆಂದು ಮೂಲಗಳು ವಿವರಿಸಿದೆ.
ಇತರ ಅಂತಹ ಪ್ರಕರಣಗಳಿಗೆ ಹೋಗುವ ಮೊದಲು, ಒಂದು ರೋಗಗ್ರಸ್ಥ ಪಿಎಸ್‌ಯುವನ್ನು ಗುರುತಿಸಿ ಅದರ ಮಾರಾಟ ಅಥವಾ ಮುಚ್ಚುಗಡೆಯ ಬಗ್ಗೆ ವಿವರವಾದ ಯೋಜನೆ ಸಿದ್ಧಪಡಿಸುವಂತೆ ಪ್ರಧಾನಿ ಕಚೇರಿಯು ಈ ಮೊದಲು ನೀತಿ ಆಯೋಗಕ್ಕೆ ಸೂಚಿಸಿತ್ತು.
ಆಯೋಗವು ರೋಗಗ್ರಸ್ಥ ಹಾಗೂ ನಷ್ಟ ಉಂಟುಮಾಡುತ್ತಿರುವ ಕಂಪೆನಿಗಳ 2 ಪ್ರತ್ಯೇಕ ಪಟ್ಟಿಗಳನ್ನು ತಯಾರಿಸಿತ್ತು. ಒಂದು ಪಟ್ಟಿಯಲ್ಲಿ ಮುಚ್ಚಬೇಕಾದ ಕಂಪೆನಿಗಳು ಹಾಗೂ ಇನ್ನೊಂದರಲ್ಲಿ ಸರಕಾರವು ಬಂಡವಾಳ ಹಿಂದೆಗೆಯಬಹುದಾದ ಕಂಪೆನಿಗಳ ಹೆಸರುಗಳಿದ್ದವು.
ಆಯೋಗವು ವ್ಯೆಹಾತ್ಮಕ ಮಾರಾಟ ಅಥವಾ ಖಾಸಗಿಕರಣಕ್ಕೆ ಅರ್ಹವಾದ ಕಂಪೆನಿಗಳ ಇನ್ನೊಂದು ಪಟ್ಟಿಯನ್ನೂ ಸಿದ್ಧಪಡಿಸುತ್ತಿದೆ.