ಅಮೆರಿಕದ ‘ಗೂಢಚಾರ’ ಪಾಕ್‌ನಲ್ಲಿ ಬಂಧನ
ಇಸ್ಲಾಮಾಬಾದ್,ಆ.7: ಪಾಕಿಸ್ತಾನದ ಅತ್ಯಂತ ಸಂವೇದನಾಕಾರಿ ಸಂಸ್ಥಾಪನೆಗಳ ಮೇಲೆ ಗೂಢಚರ್ಯೆ ನಡೆಸಿದ ಆರೋಪದಲ್ಲಿ 2011ರಲ್ಲಿ ಪಾಕ್‌ನಿಂದ ಗಡಿಪಾರು ಮಾಡಲಾಗಿದ್ದ ಅಮೆರಿಕನ್ ಪ್ರಜೆ ಮ್ಯಾಥ್ಯೂ ಕ್ರೆಗ್ ಬ್ಯಾರೆಟ್, ಶನಿವಾರ ಇಸ್ಲಾಮಾಬಾದ್‌ಗೆ ಮರಳಿದಾಗ ಆತನನ್ನು ಬಂಧಿಸಲಾಗಿದೆ.
ಗೂಢಚರ್ಯೆ ನಡೆಸಿದ ಆರೋಪದಲ್ಲಿ ಗಡಿಪಾರುಗೊಂಡ ಬಳಿಕ ಮ್ಯಾಥ್ಯೂ ಕ್ರೆಗ್‌ಗೆ ಪಾಕ್ ಪ್ರವೇಶವನ್ನು ನಿಷೇಧಿಸಲಾಗಿತ್ತು. ಶನಿವಾರ ಮುಂಜಾನೆ ಆತ ಇಸ್ಲಾಮಾಬಾದ್‌ನ ಬೆನಝೀರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ್ದ. ಪಾಕಿಸ್ತಾನದ ವಲಸೆ ಅಧಿಕಾರಿಗಳು ಕೂಡಾ ಆತನಿಗೆ ದೇಶ ಪ್ರವೇಶಿಸಲು ಅನುಮತಿ ನೀಡಿದ್ದರು. ಆದರೆ ಮ್ಯಾಥ್ಯೂ ಕ್ರೆಗ್ ಆಗಮನದ ಬಗ್ಗೆ ಪಾಕ್ ಗೃಹ ಸಚಿವ ನಿಸಾರ್ ಅಲಿ ಖಾನ್ ಅವರ ಗಮನಕ್ಕೆ ಬಂದಾಗ, ಅವರು ಕೂಡಲೇ ಆತನ ಬಂಧನಕ್ಕೆ ಆದೇಶಿಸಿದರು ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷವೆಸಗಿದ್ದಕ್ಕಾಗಿ ವಲಸೆ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.
ಬ್ಯಾರೆಟ್ ಉಳಿದುಕೊಂಡಿದ್ದ ಅತಿಥಿಗೃಹದ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಹಾಗೂ ಪೊಲೀಸ್ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಲಸೆ ಕಾನೂನುಗಳ ಉಲ್ಲಂಘನೆ ಆರೋಪದಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಪಾಕ್ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.ಬ್ಯಾರೆಟ್‌ಗೆ ಪಾಕ್ ವೀಸಾ ಹೇಗೆ ದೊರೆಯಲು ಸಾಧ್ಯವಾಯಿತೆಯೆಂಬ ತನಿಖೆ ನಡೆಸುವಂತೆಯೂ ಗೃಹ ಸಚಿವರು ಆದೇಶಿಸಿದ್ದಾರೆ.
ಬ್ಯಾರೆಟ್‌ಗೆ ವೀಸಾವನ್ನು ನೀಡಿರುವ ಅಮೆರಿಕದ ಹ್ಯೂಸ್ಟನ್‌ನ ಪಾಕಿಸ್ತಾನಿ ಕಾನ್ಸುಲೇಟ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದೆಂದು ಗೃಹ ಸಚಿವಾಲಯ ಹೇಳಿದೆ.