ನಿಮ್ಮ ಸಭೆ ನಮ್ಮ ಶಾಲೆಗಿಂತ ಮುಖ್ಯವೇ ? : ಪ್ರಧಾನಿಗೆ 8 ನೆ ತರಗತಿಯ ವಿದ್ಯಾರ್ಥಿಯ ಪ್ರಶ್ನೆ

Update: 2016-08-09 06:14 GMT

ಖಂಡ್ವಾ, ಆ.9: ‘‘ನಿಮ್ಮ ಸಭೆ ನಮ್ಮ ಶಾಲೆಗಿಂತ ಮುಖ್ಯವೇ ?’’ ಇಂತಹ ಒಂದು ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಮುಂದಿರಿಸಿದ್ದು ಮಧ್ಯ ಪ್ರದೇಶದ ಎಂಟನೆ ತರಗತಿಯ ಬಾಲಕ ದೇವಾಂಶ್ ಜೈನ್.

ಕ್ರಾಂತಿಕಾರಿ ನಾಯಕ ಚಂದ್ರಶೇಖರ್ ಆಜಾದ್ ಅವರ ಜನ್ಮ ಸ್ಥಳವಾದ ಭಾಭ್ರಾ ಗ್ರಾಮದಲ್ಲಿ ಸ್ವಾತಂತ್ರೋತ್ಸವ ಪೂರ್ವ ಅಭಿಯಾನವೊಂದಕ್ಕೆ ಚಾಲನೆ ನೀಡುವ ಸಲುವಾಗಿ ಪ್ರಧಾನಿ ಆಗಮಿಸುವ ಹಿನ್ನೆಲೆಯಲ್ಲಿ ಆತನ ಹಾಗೂ ಇತರ ಶಾಲಾ ಬಸ್ಸುಗಳನ್ನು ಪ್ರಧಾನಿಯ ರ್ಯಾಲಿಗೆ ಆಗಮಿಸುವವರಿಗೆ ಉಪಯೋಗಿಸಲಾಗುವುದರಿಂದ ಶಾಲೆಗೆ ಇಂದು ಹಾಗೂ ನಾಳೆ ರಜೆ ಘೋಷಿಸಲಾಗಿದ್ದೇ ಈ ಬಾಲಕ ಪ್ರಧಾನಿಗೆ ಪತ್ರ ಬರೆಯಲು ಕಾರಣವಾಗಿತ್ತು. ಆತನ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶಾಲೆಗಳಿಗೆ ತಮ್ಮ ಬಸ್ಸುಗಳನ್ನು ಪ್ರಧಾನಿ ಸಮಾವೇಶಕ್ಕೆ ಕೊಡಲು ಹೇಳಿದ್ದ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಿತು.

ರ್ಯಾಲಿಗೆ ಆಗಮಿಸುವವರರನ್ನು ಕರೆತರಲು ಶಾಲಾ ಬಸ್ಸುಗಳನ್ನು ಉಪಯೋಗಿಸಲಾಗುವುದರಿಂದ ಶಾಲೆಗೆ ಮಂಗಳವಾರ ಹಾಗೂ ಬುಧವಾರ ರಜೆ ಎಂದು ಶಿಕ್ಷಕರು ಹೇಳಿದಾಗ ಆತಂಕಗೊಂಡ ದೇವಾಂಶ್ ಪ್ರಧಾನಿಗೆ ಪತ್ರ ಬರೆದೇ ಬಿಟ್ಟಿದ್ದ. ‘‘ನಾನು ಅಮೆರಿಕದಲ್ಲಿ ನೀವು ನೀಡಿದ್ದ ಭಾಷಣಗಳನ್ನು ಕೇಳಿದ್ದೇನೆ. ಅಲ್ಲಿ ಸಾಕಷ್ಟು ಜನರಿದ್ದರು. ಆದರೆ ಅವರ್ಯಾರೂ ಶಾಲಾ ಬಸ್ಸುಗಳಲ್ಲಿ ಬರಲಿಲ್ಲ ಅಲ್ಲವೇ ?’’ ಎಂದು ಆತ ಪ್ರಧಾನಿಯನ್ನು ಪ್ರಶ್ನಿಸಿದ್ದ.
ತಾನು ಮೋದಿಯ ಅಭಿಮಾನಿ ಎಂದೂ ಪತ್ರದಲ್ಲಿ ಹೇಳಿಕೊಂಡ ದೇವಾಂಶ್ ಮಿಸ್ ಮಾಡದೆ ಪ್ರಧಾನಿಯ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮವನ್ನು ಆಲಿಸುತ್ತೇನೆ. ತನ್ನ ಸಹಪಾಠಿಗಳು ಈ ವಿಚಾರವಾಗಿ ತನಗೆ ತಮಾಷೆ ಮಾಡಿದರೂ ಅವರೊಂದಿಗೆ ಜಗಳ ಕೂಡ ಮಾಡುತ್ತೇನೆಂದು ಬರೆದಿದ್ದಾನೆ.

‘ಶಿವರಾಜ್ ಮಾಮಾ’ ಅವರಿಗೆ (ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಆತ ಹಾಗೆ ಕರೆಯುತ್ತಾನೆ) ಶಾಲಾ ಬಸ್ಸುಗಳನ್ನು ರ್ಯಾಲಿಗೆ ಉಪಯೋಗಿಸದಂತೆ ಹೇಳಿ, ಎಂದು ಪ್ರಧಾನಿಗೆ ಹೇಳಿದ್ದ ದೇವಾಂಶ್ ‘‘ನೀವು ಕಾಂಗ್ರೆಸ್ ನಾಯಕರಂತಲ್ಲ ಹಾಗೂ ನಮ್ಮ ಶಿಕ್ಷಣ ಹಾಗೂ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದೀರಿ’’ ಎಂದು ಬರೆದಿದ್ದಾನೆ. ‘‘ನೀವು ನನ್ನ ವಿನಂತಿಯನ್ನು ಮನ್ನಿಸಿದರೆ, ಮೋದಿ ಅಂಕಲ್ ಅವರ ಸಭೆಗೆ ಜನರು ತಾವಾಗಿಯೇ ಬರುತ್ತಾರೆ ಹಾಗೂ ಅವರನ್ನು ಕರೆದುಕೊಂಡು ಬರಲಾಗುವುದಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ’’ಎಂದು ದೇವಾಂಶ್ ತನ್ನ ಪತ್ರದ ಕೊನೆಯಲ್ಲಿ ಬರೆದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News