×
Ad

ಚೆನ್ನೈ ರೈಲು ದರೋಡೆ, ಹೋದದ್ದು 6ಕೋಟಿ ರೂ. ಇಬ್ಬರು ಪೋರ್ಟರ್‌ಗಳು ವಶಕ್ಕೆ

Update: 2016-08-10 16:04 IST

ಸೇಲಂ,ಆ.10: ಸೇಲಂನಿಂದ ಚೆನ್ನೈ ರಿಸರ್ವ್ ಬ್ಯಾಂಕ್ ರೀಜನಲ್ ಕಚೇರಿಗೆ ರೈಲಿನ ಮೂಲಕ ತರಲಾಗುತ್ತಿದ್ದ ಹಳೆ ನೋಟುಗಳು ದರೋಡೆಯಾದ ಘಟನೆಗೆ ಸಂಬಂಧಿಸಿ ಇಬ್ಬರು ಪೋರ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರೂ ಸೇಲಂ ನಿಲ್ದಾಣದ ಪೋರ್ಟರ್‌ಗಳಾಗಿದ್ದಾರೆ. ಇವರ ನೇತೃತ್ವದಲ್ಲಿ ಹಣ ಇರಿಸಲಾಗಿದ್ದ ಪೆಟ್ಟಿಗೆಯನ್ನು ರೈಲಿನ ಬೋಗಿಯಲ್ಲಿರಿಸಲಾಗಿತ್ತು ಎನ್ನಲಾಗಿದೆ.

ಇವರನ್ನು ಪೊಲೀಸರು ಪ್ರಶ್ನಿಸುತ್ತಿದ್ದು ಇದೇ ವೇಳೆ ದರೋಡೆಯ ಹಿಂದೆ ದೊಡ್ಡ ತಂಡವೊಂದು ಕಾರ್ಯಾಚರಿಸಿರುವ ಕುರಿತು ಸೂಚನೆ ಲಭಿಸಿದ್ದು, ನಾಲ್ವರ ಬೆರಳಚ್ಚು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

   ರೈಲಿನ ಬೋಗಿಯ ಮೇಲ್ಭಾಗದಲ್ಲಿ ಕನ್ನ ಕೊರೆದು ಹಣವನ್ನು ದೋಚಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರೈಲು ಚೆನ್ನೈಯ ಎಗ್ಮೋರ್ ರೈಲು ನಿಲ್ದಾಣಕ್ಕೆ ತಲುಪಿದಾಗ ಪೆಟ್ಟಿಗೆಯಿಂದ ಹಣ ಕಾಣೆಯಾಗಿರುವುದು ಪತ್ತೆಯಾಗಿತ್ತು. ವಿಶೇಷಬೋಗಿಯಲ್ಲಿ 228 ಪೆಟ್ಟಿಗೆಗಳಲ್ಲಿ ಹಣವನ್ನು ತುಂಬಿಸಿಡಲಾಗಿತ್ತು ಎನ್ನಲಾಗಿದೆ. ಈ ಪೆಟ್ಟಿಗೆಗಳಲ್ಲಿ ನಾಲ್ಕು ಪೆಟ್ಟಿಗೆಗಳನ್ನು ತೆರೆದು 5.78 ಕೋಟಿ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ. ಬೋಗಿಯ ಮೇಲ್ಭಾಗದಲ್ಲಿ ಎರಡು ಅಡಿ ಉದ್ದ ಮತ್ತು ಅಗಲದಲ್ಲಿ ತೂತು ಮಾಡಿ ಕಳ್ಳರು ಬೋಗಿಯ ಒಳಕ್ಕೆ ನುಗ್ಗಿದ್ದರು. ಐವತ್ತುಕೋಟಿ ರೂಪಾಯಿ ದರೋಡೆಯಾಗಿದೆ ಎಂದು ಮೊದಲು ತನಿಖೆ ನಡೆಸಿದ ಪೊಲೀಸರು ಅಂದಾಜಿಸಿದ್ದರು. ಆದರೆ ನಂತರ ದರೋಡೆಯಾದ ಹಣದ ಸರಿಯಾದ ಲೆಕ್ಕವನ್ನು ಹಣ ನಷ್ಟವಾಗಿರುವ ಬ್ಯಾಂಕ್‌ಗಳೇ ಬಹಿರಂಗಗೊಳಿಸಿವೆ. ಕೆಟ್ಟು ಹೋದ ನೋಟುಗಳಿವು. ಇದನ್ನು ನಾಶಪಡಿಸಲಿಕ್ಕಾಗಿ ಕೊಂಡೊಯ್ಯಲಾಗುತ್ತಿತ್ತು. ಆದರೆ ಬ್ಯಾಂಕ್‌ಗಳಿಗೆ ಕೊಟ್ಟು ಇದನ್ನು ಎಕ್ಸ್‌ಚೇಂಜ್ ಮಾಡಿಸಿಕೊಳ್ಳಲು ಸಾಧ್ಯವಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News