ಝಾಕಿರ್ ನಾಯ್ಕ್ ವಿರುದ್ಧ ತನಿಖೆಯಲ್ಲಿ ರಾಜಕೀಯ ಕೈವಾಡ
ಮುಂಬೈ,ಆ.11 :ಉಗ್ರರೊಂದಿಗೆನಂಟು ಹೊಂದಿದ್ದಾರೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂದು ಮುಂಬೈ ಪೊಲೀಸರಿಂದ ಗುರುತರ ಆರೋಪ ಹೊತ್ತ ಇಸ್ಲಾಂ ವಿದ್ವಾಂಸ ಝಾಕಿರ್ ನಾಯ್ಕ್ ವಿರುದ್ಧ ಮುಂಬೈ ಪೊಲೀಸರ ತನಿಖೆ ಮುಂದುವರಿಯುತ್ತಿದ್ದಂತೆಯೇ ಮಾಜಿ ಐಪಿಎಸ್ ಅಧಿಕಾರಿ ವೈ ಪಿ ಸಿಂಗ್ ಗಂಭೀರ ಆಪಾದನೆಯೊಂದನ್ನು ಮಾಡಿದ್ದಾರೆ. ಝಾಕಿರ್ ವಿರುದ್ಧದ ತನಿಖೆಯಲ್ಲಿ ರಾಜಕೀಯ ಕೈವಾಡವಿದೆಯೆಂದು ಅವರು ದೂರಿದ್ದಾರೆ.
ಈ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಿಸುವಾಗ ಪೊಲೀಸರು ಸಾಮಾನ್ಯ ಪ್ರಕ್ರಿಯೆಯನ್ನು ಅನುಸರಿಸಿಲ್ಲವೆಂದು ಆರೋಪಿಸಿದ ಅವರು ಇದರ ಹಿಂದೆ ಕಾಣದ ರಾಜಕೀಯ ಕೈಗಳು ಇರುವ ಸಾಧ್ಯತೆಯಿದೆಯೆಂದಿದ್ದಾರೆ.
‘‘ಸೆಕ್ಷನ್ 153ಎ ಹಾಗೂ 295ಎ ಅನ್ವಯ ಪ್ರಕರಣ ದಾಖಲಿಸುವುದೆಂದರೆ, ಆರೋಪಿ ದೇಶದ ಹಿತಾಸಕ್ತಿ ಹಾಗೂ ಸಾಮರಸ್ಯಕ್ಕೆ ವಿರುದ್ಧವಾಗಿ ಏನನ್ನೋ ಮಾತನಾಡಿದ್ದಾನೆಂದರ್ಥ. ಇದು ಕ್ರಿಮಿನಲ್ ಅಪರಾಧವಾದರೂ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವ ನಮ್ಮಂತಹ ದೇಶದಲ್ಲಿ ಈ ಆರೋಪವನ್ನು ಸಾಬೀತು ಪಡಿಸುವುದು ಬಹಳ ಕಷ್ಟ,’’ ಎಂದು ಸಿಂಗ್ ಹೇಳಿದ್ದಾರೆ. ‘‘ಯಾರಿಗಾದರೂ ತನ್ನ ಧರ್ಮವನ್ನು ಹೊಗಳ ಬೇಕೆನಿಸಿದರೆ ಅದರರ್ಥಆತ ತಪ್ಪು ಮಾಡಿದ್ದಾನೆಂದಲ್ಲ. ಎಲ್ಲಾ ಧರ್ಮಗಳ ಎಲ್ಲಾ ಧಾರ್ಮಿಕ ನಾಯಕರೂ ಉತ್ಪ್ರೇಕ್ಷಿತಹೇಳಿಕೆಗಳನ್ನು ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಅಪರಾಧ ಮಾಡಿದ್ದಾರೆಂದು ಹೇಳಲಾಗದು,’’ಎಂದು ಸಿಂಗ್ ಹೇಳಿದ್ದಾರೆ.
ಝಾಕಿರ್ ನಾಯ್ಕ್ ದೇಶಕ್ಕೆ ಮರಳಿದೇ ಇದ್ದಲ್ಲಿ ಅವರನ್ನು ಗಡೀಪಾರು ಮಾಡುವಂತೆ ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಂಗಳವಾರ ಹೇಳಿದ್ದರು. ನಾಯ್ಕ್ ವಿರುದ್ಧ ಮುಂಬೈ ಪೊಲೀಸರು ಗಂಭೀರ ಆರೋಪ ಹೊರಿಸಿ ಸಲ್ಲಿಸಲಾಗಿರುವ ವರದಿ ತಮಗೆ ದೊರೆತಿದೆಯೆಂದೂ ಫಢ್ನವಿಸ್ ತಿಳಿಸಿದ್ದರು.
ಢಾಕಾ ದಾಳಿಯ ಉಗ್ರರು ನಾಯ್ಕ್ ಭಾಷಣಗಳಿಂದ ಪ್ರಭಾವಿತರಾಗಿದ್ದಿರಬಹುದೆಂಬ ವರದಿಗಳ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮಹಾರಾಷ್ಟ್ರ ಸರಕಾರ ಆನ್ ಲೈನ್ ನಲ್ಲಿ ಲಭ್ಯವಿರುವ ನಾಯ್ಕ್ ಭಾಷಣಗಳನ್ನು ತನಿಖೆಗೊಳಪಡಿಸಲು ಮುಂಬೈ ಪೊಲೀಸರಿಗೆ ಆದೇಶಿಸಿತ್ತು.