‘ದಲಿತರಿಗೆ ನಿಮ್ಮ ಸಹಾನುಭೂತಿಯ ಅಗತ್ಯವಿಲ್ಲ’: ಪ್ರಧಾನಿ ಮೋದಿ ವಿರುದ್ಧ ಮಾಯಾವತಿ ದಾಳಿ
ಹೊಸದಿಲ್ಲಿ,ಆ.11: ಗೋರಕ್ಷಕರಿಂದ ದಲಿತರ ಮೇಲಿನ ದಾಳಿಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳು ಉನಾ ಘಟನೆಯನ್ನು ವಿರೋಧಿಸಿ ದಲಿತರಿಂದ ಬೃಹತ್ ಪ್ರತಿಭಟನೆಗಳ ಬಳಿಕ ಹಾನಿಯನ್ನು ನಿಯಂತ್ರಿಸುವ ಪ್ರಯತ್ನವಾಗಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರು ಗುರುವಾರ ಇಲ್ಲಿ ಆರೋಪಿಸಿದರು.
ಪ್ರಧಾನಿಯವರು ಈ ವಿಷಯದ ಕುರಿತು ಲೋಕಸಭೆಯಲ್ಲಿ ಮಾತನಾಡಬೇಕು. ಅವರು ಹೊರಗಡೆ ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ದುರುದ್ದೇಶದ್ದಾಗಿವೆ. ರೋಹಿತ್ ವೇಮುಲಾ ಆತ್ಮಹತ್ಯೆ,ಉನಾದಲ್ಲಿ ಗೋರಕ್ಷಕರಿಂದ ದಲಿತ ಯುವಕರಿಗೆ ಹಲ್ಲೆಯಂತಹ ಘಟನೆಗಳ ಬಳಿಕ ದಲಿತರು ಬಿಜೆಪಿಯನ್ನು ದ್ವೇಷಿಸುತ್ತಿದ್ದಾರೆ. ಹೀಗಾಗಿಯೇ ಆಗಿರುವ ಹಾನಿಯನ್ನು ನಿಯಂತ್ರಿಸಲು ಪ್ರಯತ್ನಗಳು ನಡೆದಿವೆ ಎಂದ ಮಾಯಾವತಿ,ದಲಿತರಿಗೆ ಪ್ರಧಾನಿಯವರ ಸಹಾನುಭೂತಿಯ ಅಗತ್ಯವಿಲ್ಲ. ಅದರ ಬದಲು ದಲಿತರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗುವಂತೆ ಅವರು ನೋಡಿಕೊಳ್ಳಬೇಕು ಎಂದರು.
ರವಿವಾರ ಹೈದರಾಬಾದ್‌ನಲ್ಲಿ ಭಾಷಣ ಮಾಡಿದ್ದ ಮೋದಿ, ನಿಮಗೆ ಯಾರ ಮೇಲಾದರೂ ದಾಳಿ ನಡೆಸಬೇಕು ಎಂದಿದ್ದರೆ ನನ್ನ ಮೇಲೆ ದಾಳಿ ನಡೆಸಿ,ದಲಿತ ಬಾಂಧವರ ಮೇಲಲ್ಲ. ನಿಮಗೆ ಯಾರ ಮೇಲಾದರೂ ಗುಂಡು ಹಾರಿಸಬೇಕು ಎಂದಿದ್ದರೆ ನನ್ನ ಮೇಲೆ ಗುಂಡು ಹಾರಿಸಿ,ದಲಿತ ಬಾಂಧವರ ಮೇಲಲ್ಲ ಎಂದು ಹೇಳಿದ್ದರು.