×
Ad

ಗುಜರಾತ್: ದಲಿತರ ತಲ್ಲಣ ಕೊನೆಗೊಂಡೀತೇ?

Update: 2016-08-11 23:58 IST

ಮ್ಮ ಮೇಲಿನ ಹಲ್ಲೆಯ ವಿರುದ್ಧ ನ್ಯಾಯಯುತವಾಗಿ ಪ್ರತಿಭಟಿಸುವ ಶಕ್ತಿಯನ್ನೇ ಇಂದು ಗುಜರಾತಿನ ದಲಿತರು ಕಳೆದುಕೊಂಡಿದ್ದಾರೆ ಅಥವಾ ಕಳೆದುಕೊಳ್ಳುವಂತೆ ಮಾಡಲಾಗಿದೆ. ಯಾಕೆಂದರೆ ಇತ್ತೀಚೆಗೆ ನಡೆದ ಹಲ್ಲೆ ಘಟನೆಯ ವೀಡಿಯೊ ವೈರಲ್ ಆಗುತ್ತಲೇ ದಲಿತರು ಬೀದಿಗಿಳಿದರು, ಹೆದ್ದಾರಿ ಬಂದ್ ಮಾಡಿದರು. ಆದರೆ ಮುಂದೆ ಘಟನೆಯ ವಿರುದ್ಧ ಹೀಗೆಯೇ ಪ್ರತಿಭಟಿಸಿದರೆ ಎಲ್ಲಿ ಸರಕಾರ ತಮ್ಮ ಮೇಲೆ ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತದೆ ಎಂದು ಹೆದರಿದ ದಲಿತರು ಪರ್ಯಾಯ ಮಾರ್ಗವಾಗಿ ಬೇರೆ ದಾರಿ ಕಾಣದೆ ಆತ್ಮಹತ್ಯೆಯ ಹಾದಿ ಹಿಡಿದಿರು. ಒಬ್ಬಿಬ್ಬರಲ್ಲ ಬರೋಬ್ಬರಿ 20 ಮಂದಿ ದಲಿತರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು ಮತ್ತು ಹೀಗೆ ಆತ್ಮಹತ್ಯೆಗೆ ಯತ್ನಿಸಿದವರಲ್ಲಿ ಒಬ್ಬರು ಸಾವಿಗೂ ಶರಣಾದರು. ಇದರಿಂದ ಅರ್ಥವಾಗುವುದೆಂದರೆ ಗುಜರಾತಿನ ದಲಿತರು ತಲುಪಿರುವ ಅಸಹಾಯಕ ಪರಿಸ್ಥಿತಿ ಎಂಥದ್ದು ಎಂಬುದು. ತಮಗೆ ಯಾರೂ ಸಹಾಯಕ್ಕೆ ಬರುವುದಿಲ್ಲ, ತಮ್ಮ ಪರವಾಗಿ ಯಾರೂ ಇಲ್ಲ ಎಂಬ ದಯನೀಯ ಸ್ಥಿತಿ ಅದು. ಗುಜರಾತ್ ಸರಕಾರ ಈ ಘಟನೆ ನಡೆದು 10 ದಿನವಾದರೂ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದೊಂದು ಸಹಜ ಘಟನೆ ಎಂಬಂತೆ ಇತ್ತು! ಆದರೆ ಘಟನೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬಿಎಸ್ಪಿ ನಾಯಕಿ ಮಾಯಾವತಿಯವರು ಪ್ರಸ್ತಾಪಿಸುತ್ತಲೇ ಗುಜರಾತ್ ಸಿಎಂ ಆನಂದಿಬೆನ್ ಪಟೇಲ್ ಎಚ್ಚೆತ್ತುಕೊಂಡರು! ಯಥಾಪ್ರಕಾರ ದಲಿತರ ಮೇಲಿನ ಹಲ್ಲೆಯನ್ನು ತಮ್ಮ ಹಣದಲ್ಲಿ ಅಳೆದ ಆನಂದಿಬೆನ್ ಪಟೇಲ್ ಪರಿಹಾರವನ್ನು 1ಲಕ್ಷದಿಂದ 4ಲಕ್ಷಕ್ಕೆ ಏರಿಸಿದರು. ಈ ನಡುವೆ ಸ್ವಾಭಿಮಾನಿ ದಲಿತರು ತಮ್ಮ ಪ್ರತಿಭಟನೆಯ ರೀತಿಯನ್ನು ವಿನೂತನ ಮಾದರಿಗೆ ಬದಲಿಸಿ ಸತ್ತ ದನಗಳ ಶವಗಳನ್ನು ತೆಗೆಯುವುದಿಲ್ಲ ಎಂದು ನಿರ್ಧರಿಸಿ ಸುಮಾರು ಒಂದು ಲಾರಿ ಸತ್ತ ದನಗಳ ಶವಗಳನ್ನು ತಂದು ಗುಜರಾತಿನ ಸುರೇಂದ್ರ ನಗರ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಸುರಿದರು. ಮುಂದುವರಿದು ಜುಲೈ 20ರಂದು ಗುಜರಾತ್ ಬಂದ್ ನಡೆಸಿದರು. ನಂತರ ಜುಲೈ 25ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಮೌನವಾಗಿ ನಿಂತುಕೊಂಡು ಪ್ರತಿಭಟನೆಯನ್ನು ದಲಿತರು ನಡೆಸಿದರು. ಅಂತೆಯೇ ಇದರ ಭಾಗವಾಗಿ ದಲಿತರು ಗುಜರಾತಿನ ಉದ್ದಗಲಕ್ಕೂ ರಸ್ತೆಗಳ ಮಧ್ಯೆ ಸತ್ತ ದನಗಳ ಶವ ಸುರಿದು ಗೋರಕ್ಷಕರ ಗೋವಿನ ಪ್ರೀತಿ ಪರೀಕ್ಷಿಸಿದರು. ಖಂಡಿತ, ಯಾವ ಗೋರಕ್ಷಕನೂ, ಗೋಮಾತೆ ಪೂಜಕನೂ ಸತ್ತ ಆ ದನಗಳ ಶವ ತೆಗೆದು ತಮ್ಮ ಗೋ ಪ್ರೀತಿ ಮೆರೆಯಲಿಲ್ಲ! ನಡುವೆ ಕಳೆದ ಜುಲೈ 31ರಂದು ಗುಜರಾತಿನ ರಾಜಧಾನಿ ಅಹ್ಮದಾಬಾದ್‌ನಲ್ಲಿ ದಲಿತರು ಮಹಾ ಸಮ್ಮೇಳನ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿ ಇಡೀ ಜಗತ್ತಿಗೆ ತಮ್ಮ ಶಕ್ತಿ ತೋರಿಸಿದ್ದಾರೆ. ಈ ಸಮಾವೇಶದಲ್ಲಿ 25 ಸಾವಿರಕ್ಕೂ ಹೆಚ್ಚು ದಲಿತರು ಒಟ್ಟಾಗಿ ‘‘ತಾವು ಇನ್ನೆಂದೂ ಸತ್ತ ಪ್ರಾಣಿಗಳ ಶವ ತೆಗೆಯುವುದಿಲ್ಲ’’ ಎಂಬ ಅಭೂತಪೂರ್ವ, ಕೆಚ್ಚೆದೆಯ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ತಮಗೆ ಪರ್ಯಾಯ ಉದ್ಯೋಗವನ್ನು ಒದಗಿಸಿಕೊಡಬೇಕೆಂದು ಕೂಡ ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಮುಂದಿನ ಹಂತವಾಗಿ ಆಗಸ್ಟ್ 5ರಿಂದ 15ರ ಸ್ವಾತಂತ್ರ್ಯ ದಿನಾಚರಣೆಯವರೆಗೆ ಅಹ್ಮದಾಬಾದ್‌ನಿಂದ ಉನಾದವರೆಗೆ ಪಾದಯಾತ್ರೆ ನಡೆಸಲೂ ಅವರು ನಿರ್ಧರಿಸಿಯಾಗಿದೆ. ದುರಂತವೆಂದರೆ ಈ ಸಮಾವೇಶ ನಡೆದ ದಿನವೇ ಆತ್ಮಹತ್ಯೆಗೆ ಯತ್ನಿಸಿದ್ದ 20 ಜನ ದಲಿತರಲ್ಲಿ ಮತ್ತೊಬ್ಬ ದಲಿತ ಅಸುನೀಗಿದ್ದಾರೆ. ಈಗ ಅಧಿಕಾರದಲ್ಲಿರುವವರು ಮೊಸಳೆ ಕಣ್ಣೀರು ಸುರಿಸಲು ಆರಂಭಿಸಿದ್ದಾರೆ. ಇದು ಯಾಕಾಗಿ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

2001ರಲ್ಲಿ ಗೋಧ್ರೋತ್ತರ ಗಲಭೆಯಲ್ಲಿ ಮುಸ್ಲಿಮರು ಅಪಾರ ನಷ್ಟ ಅನುಭವಿಸಿದ ನಂತರ ಮುಂದಿನ ಸರದಿ ದಲಿತರದ್ದು ಎಂಬಂತೆ ಈಗಿನ ಬೆಳವಣಿಗೆಗಳು ಘಟಿಸುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿಅಂಶಗಳನ್ನೇ ಇಲ್ಲಿ ದಾಖಲಿಸುವುದಾದರೆ ಕಳೆದ ವರ್ಷ ಅಂದರೆ 2015ರಲ್ಲಿ ಗುಜರಾತ್‌ನಲ್ಲಿ ದಲಿತರ ಮೇಲಿನ ಹಲ್ಲೆ ಐದು ಪಟ್ಟು ಹೆಚ್ಚಾಗಿದೆ. ಅಂದರೆ 2015ರಲ್ಲಿ ಗುಜರಾತ್‌ನಲ್ಲಿ ಪ್ರತೀ 1ಲಕ್ಷ ದಲಿತರಿಗೆ 163 ಪ್ರಕರಣಗಳು ಎಂಬಂತೆ ದೌರ್ಜನ್ಯ ದಲಿತರ ಮೇಲೆ ನಡೆದಿವೆ. ಹಾಗೆಯೇ ದೌರ್ಜನ್ಯ ಪ್ರಕರಣಗಳ ರಾಷ್ಟ್ರೀಯ ಸರಾಸರಿಯಲ್ಲಿಯೂ ಅಷ್ಟೆ, 2015ರಲ್ಲಿ ಇಡೀ ದೇಶದಲ್ಲಿಯೇ ಗುಜರಾತ್‌ನಲ್ಲಿ ದಲಿತರ ಮೇಲಿನ ದೌರ್ಜನ್ಯದ ಸರಾಸರಿ ಅತಿ ಹೆಚ್ಚು. ಸ್ಪಷ್ಟ ಸಂಖ್ಯೆಯನ್ನೇ ಇಲ್ಲಿ ಉಲ್ಲೇಖಿಸುವುದಾದರೆ 2015ರಲ್ಲಿ ಗುಜರಾತ್ ನಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 6,665. ಹಾಗೆಯೇ ಇದರ ನಂತರದ ಸ್ಥಾನ ಬಿಜೆಪಿ ಆಳ್ವಿಕೆ ಇರುವ ಮತ್ತೊಂದು ರಾಜ್ಯ ಛತ್ತೀಸಗಡ! ಈ ನಿಟ್ಟಿನಲ್ಲಿ ಹೇಳುವುದಾದರೆ ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಲ್ಲಿ ಸಾಮಾಜಿಕ ಭಯೋತ್ಪಾದನೆ ತಾರಕ್ಕೇರಿರುವುದು ಸ್ಪಷ್ಟ. ಗುಜರಾತ್ ಇಂದು ದಲಿತರ ಪಾಲಿನ ನರಕದ ಪ್ರಯೋಗಶಾಲೆಯಾಗಿದೆ. ‘ಗುಜರಾತ್ ಮಾದರಿ’ ಎಂದು ನೆನೆಸಿಕೊಂಡರೇನೇ ಭಯವಾಗುತ್ತದೆ. ವಿಶೇಷವಾಗಿ ದಲಿತರಿಗೆ. ಯಾಕೆಂದರೆ ಕಣ್ಣಮುಂದೆ ಕಾಣುವ ಆ ಅಮಾಯಕ ದಲಿತರ ನೋವು? ಚೀತ್ಕಾರ? ಅವರಿಗೆ ಥಳಿಸುತ್ತಿದ್ದವರ ಆ ಅಮಾನವೀಯ ವರ್ತನೆ?
   

Writer - ರಘೋತ್ತಮ ಹೊ.ಬ, ಮೈಸೂರು

contributor

Editor - ರಘೋತ್ತಮ ಹೊ.ಬ, ಮೈಸೂರು

contributor

Similar News