ಕರ್ನಾಟಕ ಮಾದರಿ ಅನುಸರಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ, ಆ.12: ಅಪಘಾತ ಗಾಯಾಳುಗಳ ಚಿಕಿತ್ಸೆಗೆ ವೈದ್ಯಕೀಯ ವಿಮೆ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ಮಾದರಿ ಅನುಸರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ತಕ್ಷಣ ಸ್ಪಂದಿಸುವ ಸಲುವಾಗಿ ಸಾರ್ವತ್ರಿಕ ವಿಮಾ ಸುರಕ್ಷೆ ಒದಗಿಸಲಿದೆ. ಗಾಯಾಳುಗಳಿಗೆ ತಕ್ಷಣಕ್ಕೆ ಚಿಕಿತ್ಸೆ ನಿರಾಕರಿಸಬಾರದು ಎಂಬ ಕಾರಣಕ್ಕೆ ಈ ಸುರಕ್ಷೆಗೆ ಮುಂದಾಗಿದೆ.
ಯು.ಟಿ.ಖಾದರ್ ಅವರು ಕರ್ನಾಟಕದಲ್ಲಿ ಆರೋಗ್ಯ ಸಚಿವರಾಗಿದ್ದಾಗ, 'ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆ'ಯನ್ನು ಆರಂಭಿಸಿದ್ದರು. ಈ ಯೋಜನೆಯಡಿ ಹಣಕಾಸು ನೆರವು ನೀಡುವ ಜತೆಗೆ, ಅಪಘಾತ ಸಂತ್ರಸ್ತರಿಗೆ ತಕ್ಷಣ 25 ಸಾವಿರ ರೂಪಾಯಿಗಳವರೆಗೂ ನಗದುರಹಿತ ಚಿಕಿತ್ಸೆಗಳನ್ನು ಘಟನೆ ನಡೆದ 48 ಗಂಟೆಗಳ ಒಳಗಾಗಿ ನೀಡಲಾಗುತ್ತದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ ಸಂಬಂಧ ಅಗತ್ಯ ತಿದ್ದುಪಡಿ ತರಲಿದ್ದು, ಇದರ ಅನ್ವಯ ಪ್ರತ್ಯೇಕ ನಿಧಿ ಸ್ಥಾಪಿಸಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿರುವ ತಿದ್ದುಪಡಿಯ ಅನ್ವಯ ಮೋಟಾರು ವಾಹನ ಅಪಘಾತ ನಿಧಿ ಸ್ಥಾಪಿಸಲಾಗುತ್ತದೆ.
ದೇಶದಲ್ಲಿ ಕಳೆದ ವರ್ಷ ಕನಿಷ್ಠ ಐದು ಲಕ್ಷ ಮಂದಿ ಅಪಘಾತಗಳಲ್ಲಿ ಗಾಯಗೊಂಡಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ದೊರೆತಲ್ಲಿ ಕನಿಷ್ಠ ಶೇಕಡ 50ರಷ್ಟು ಮಂದಿಯ ಜೀವ ಉಳಿಸಬಹುದಾಗಿದೆ ಎಂಬ ಕಾರಣಕ್ಕೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ 1.46 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಈ ನಿಧಿಗೆ ಕೇಂದ್ರ ಸರ್ಕಾರ ನಿರ್ಧರಿಸುವಂತೆ ತೆರಿಗೆ, ವಿಶೇಷ ಸೆಸ್ ಅಥವಾ ಇತರ ಯಾವುದೇ ಅನುದಾನದಿಂದ ಹಣ ಒದಗಿಸಬಹುದಾಗಿದೆ.