ಲಂಚ ಕೊಡದ್ದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ ! : 10 ತಿಂಗಳ ಶಿಶು ಮೃತ್ಯು

Update: 2016-08-12 07:10 GMT

ಅಲಹಾಬಾದ್, ಆ.12: ಸರಕಾರಿ ಆಸ್ಪತ್ರೆಯ ನೌಕರರಿಗೆ ಲಂಚ ಕೊಡದ್ದರಿಂದ ಚಿಕಿತ್ಸೆ ದೊರೆಯದೆ ಹತ್ತು ತಿಂಗಳು ಪ್ರಾಯದ ಎಳೆಯ ಶಿಶುವೊಂದು ಮೃತವಾದ ಘಟನೆ ಉತ್ತರಪ್ರದೇಶದ ಬಹ್ರಿಯಾದಿಂದ ವರದಿಯಾಗಿದೆ. ತೀವ್ರಜ್ವರ, ಬಳಲಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ಸುಮಿತಾ-ಶಿವದತ್ತ್ ದಂಪತಿ ತಮ್ಮ ಮಗುವನ್ನು ಕರೆ ತಂದಿದ್ದರು. ಆಸ್ಪತ್ರೆಗೆ ಸೇರಿಸಿಕೊಳ್ಳಲು ದಾಖಲೆ ತಯಾರಿಸಲಿಕ್ಕೆ ದಾದಿಯೊಬ್ಬಳು ಲಂಚ ಕೇಳಿದ್ದಳು, ಆನಂತರ ವಾರ್ಡ್ ಕರೆದೊಯ್ಯಲು ಮಹಿಳೆಯೊಬ್ಬಳು ಲಂಚ ಕೇಳಿದ್ದಳು ಎಂದು ಸುಮಿತಾ ಹೇಳಿದ್ದಾರೆ.

ಇವರಿಬ್ಬರನ್ನೂ ಹಣಕೊಟ್ಟು ಸಮಾಧಾನ ಪಡಿಸಲಾಯಿತು. ನಂತರ ಗುರುವಾರ ಬೆಳಗ್ಗೆ ವಾರ್ಡ್ ಕಂಪೌಂಡರ್ ಮಗುವಿಗೆ ತುರ್ತು ಇಂಜೆಕ್ಷನ್ ಅಗತ್ಯವಿದೆ ಎಂದು ಇದಕ್ಕೂ ಲಂಚವನ್ನು ಕೇಳಿದ್ದಾನೆ, ಆದರೆ ಕಂಪೌಂಡರ್ ಕೇಳಿದ ಹಣ ನಮ್ಮಲ್ಲಿರಲಿಲ್ಲ. ಮತ್ತೆ ಕೊಡುತ್ತೇವೆ ಎಂದಾಗ ಇಂಜಕ್ಷನ್ ಕೊಡುವುದಿಲ್ಲ ಎಂದು ಹಠ ಹಿಡಿದಿದ್ದಾನೆ. ಈ ನಡುವೆ ಮಗು ಕೊನೆಯುಸಿರೆಳೆಯಿತು ಎಂದು ಸುಮಿತಾ ಹೇಳಿದ್ದಾರೆ.

ವೈದ್ಯರು ಖಾಸಗಿ ಪ್ರಾಕ್ಟೀಸ್ ಗೆ ತೆರಳುವುದರಿಂದ, ಅವರನ್ನು ಹೊರತು ಪಡಿಸಿ ಸರಕಾರಿ ಆಸ್ಪತ್ರೆಯ ಇತರೆಲ್ಲ ನೌಕರರಿಗೆ ಲಂಚ ಕೊಡದೆ ಚಿಕಿತ್ಸೆ ದೊರಕದ ಸ್ಥಿತಿ ಅಲ್ಲಿದೆ ಎನ್ನಲಾಗಿದೆ. ಮನೆ ಮಾರಿಯಾದರೂ ಖಾಸಗಿ ಆಸ್ಪತ್ರೆಗೆ ಹೋಗುವುದು ಒಳ್ಳೆಯದು ಎಂದು ಸುಮಿತಾ ಹೇಳಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News