ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯಪ್ರವೇಶದ ಬಳಿಕ ಶಾರುಖ್‌ಗೆ ಬಿಡುಗಡೆ ಭಾಗ್ಯ

Update: 2016-08-13 03:04 GMT

ಹೊಸದಿಲ್ಲಿ, ಆ.13: ಭಾರತದ ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶದ ಬಳಿಕ ಅಮೆರಿಕದ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ.

ಹೊಸದಿಲ್ಲಿ ಹಾಗೂ ವಾಷಿಂಗ್ಟನ್‌ನಲ್ಲಿರುವ ಅಮೆರಿಕನ್ ರಾಜತಾಂತ್ರಿಕರ ಜೊತೆ ಈ ಬಗ್ಗೆ ಚರ್ಚಿಸಿದ ಕೇಂದ್ರ ಸರಕಾರ, ವಿಶ್ವಪರಿಚಿತರಾಗಿರುವ ಭಾರತದ ಹೆಮ್ಮೆಯ ಕಲಾವಿದನಿಗೆ "ಹೆಚ್ಚುವರಿ ಸ್ಕ್ರೀನಿಂಗ್"ನಂಥ ಅವಮಾನ ಮಾಡಬಾರದು ಎಂದು ಸ್ಪಷ್ಟವಾಗಿ ಸಂದೇಶ ರವಾನಿಸಿದೆ.

ಅಮೆರಿಕನ್ ಇಮಿಗ್ರೇಷನ್ ಅಧಿಕಾರಿಗಳು ಹೆಚ್ಚುವರಿ ಸ್ಕ್ರೀನಿಂಗ್‌ಗಾಗಿ ಶಾರುಖ್ ಅವರನ್ನು ಪಕ್ಕಕ್ಕೆ ನಿಲ್ಲುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಖಾನ್ ಅವರ ಪರಿವಾರದವರು ವಿದೇಶಾಂಗ ಸಚಿವಾಲಯ ಅಧಿಕಾರಿಗಳನ್ನು ಸಂಪರ್ಕಿಸಿದರು. ತಕ್ಷಣ ಇದಕ್ಕೆ ಸ್ಪಂದಿಸಿ, ಇಲ್ಲಿನ ಅಮೆರಿಕನ್ ರಾಜಭಾರ ಕಚೇರಿ ಹಾಗೂ ವಾಷಿಂಗ್ಟನ್‌ನಲ್ಲಿ ಅಮೆರಿಕದ ರಕ್ಷಣಾ ಇಲಾಖೆಯ ಜೊತೆ ಭಾರತೀಯ ರಾಯಭಾರ ಕಚೇರಿ ವಿಷಯದ ಬಗ್ಗೆ ಚರ್ಚಿಸಿತು. ಇದರಿಂದ ಕ್ಷಿಪ್ರ ಬಿಡುಗಡೆ ಸಾಧ್ಯವಾಯಿತು ಎಂದು ಅಧಿಕೃತ ಮೂಲಗಳು ಹೇಳಿವೆ.

ಶಾರುಖ್ ಸುಮಾರು ಎರಡು ಗಂಟೆ ಕಾಲ ವಿಮಾನ ನಿಲ್ದಾಣದಲ್ಲೇ ಉಳಿಯಬೇಕಾಯಿತು. ಅಮೆರಿಕ ರಾಜಭಾರಿ ರಿಚರ್ಡ್ ವರ್ಮಾ ಅವರು ಕ್ಷಮೆ ಯಾಚಿಸುವ ಮೂಲಕ ಈ ವಿವಾದದ ಕಿಡಿ ಹಬ್ಬದಂತೆ ನೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News