ಹಾಲಿವುಡ್‌ಗೆ ಅರವಿಂದ್‌ಸ್ವಾಮಿ
ರೋಜಾ, ಬಾಂಬೆ ಚಿತ್ರಗಳ ಮೂಲಕ ಯುವ ತಲೆಮಾರಿನ ಮನಗೆದ್ದ ನಟ ಅರವಿಂದ್ ಸ್ವಾಮಿ, ಆ ಬಳಿಕ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದರೂ, ಅವ್ಯಾವುದೂ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಡಲಿಲ್ಲ. 2006ರಲ್ಲಿ ಬಿಡುಗಡೆಯಾದ ಸಶಾನಂ ಚಿತ್ರದ ಬಳಿಕ ಸುಮಾರು ಆರು ವರ್ಷಗಳ ಕಾಲ ಚಿತ್ರರಂಗ ದಿಂದ ದೂರ ವಿದ್ದರು. ಮೂರು ವರ್ಷಗಳ ಹಿಂದೆಯಷ್ಟೇ ಮಣಿರತ್ನಂ ನಿರ್ದೇಶನದ ‘ಕಡಲ್’ ಚಿತ್ರದ ಮೂಲಕ ಮತ್ತೆ ಸಿನೆಮಾರಂಗಕ್ಕೆ ವಾಪಸಾಗಿದ್ದರು. ಈ ವರ್ಷದ ಆರಂಭದಲ್ಲಿ ತೆರೆಕಂಡ ‘ತನಿ ಓರುವನ್’ನಲ್ಲಿ, ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಅವರ ಅಭಿನಯವು ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಅಪಾರ ಪ್ರಶಂಸೆಯನ್ನು ಗಳಿಸಿತ್ತು. ಆ ಬಳಿಕ ಅರವಿಂದ್‌ಗೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳ ಸುರಿಮಳೆಯಾಗುತ್ತಿದೆ. ಆದರೆ ತನ್ನ ಪಾತ್ರಗಳ ಬಗ್ಗೆ ಅತ್ಯಂತ ಬ್ಯುಸಿಯಾಗಿರುವ ಈ ಪ್ರತಿಭಾವಂತ ನಟ, ಕೈಬೆರಳೆಣಿಕೆಯ ಚಿತ್ರಗಳಿಗಷ್ಟೇ ಕಾಲ್‌ಶೀಟ್ ನೀಡಿದ್ದಾರೆ. ಈ ನಡುವೆ ಲೇಟೆಸ್ಟ್ ಆಗಿ ಕೇಳಿಬರುತ್ತಿರುವ ಸುದ್ದಿಯೆಂದರೆ, ಅರವಿಂದ್, ಹಾಲಿವುಡ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆಂಬುದು. ಆಸ್ಕರ್ ಪ್ರಶಸ್ತಿ ವಿಜೇತ ಮ್ಯಾಡ್‌ಮಾಕ್ಸ್ ಚಿತ್ರದ ನಿರ್ಮಾಪಕರು, ತಮ್ಮ ನೂತನ ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ಅರವಿಂದ್‌ರನ್ನು ಸಂಪರ್ಕಿಸಿದ್ದಾರೆ. ಈ ಚಿತ್ರದಲ್ಲಿ ಅತ್ಯಂತ ಮಹತ್ವದ ಪಾತ್ರವೊಂದನ್ನು ಅರವಿಂದ್ ಸ್ವಾಮಿ ನಿರ್ವಹಿಸಲಿದ್ದಾರೆಂದು ಕಾಲಿವುಡ್ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.