ಪ್ರಿಯಾಂಕಗೆ ಬಾಲಿವುಡ್ ಬೇಡವಾಯಿತೇ?
ಹಾಲಿವುಡ್ ಸಿನೆಮಾ ಹಾಗೂ ಅಮೆರಿಕನ್ ಟಿವಿ ಶೋಗಳಲ್ಲಿ ಹೇರಳ ಅವಕಾಶಗಳು ಬರಲಾರಂಭಿಸಿದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಿಂದ ದೂರ ಸರಿಯುತ್ತಿರುವಂತೆ ಕಾಣುತ್ತದೆ. ಬಾಲಿವುಡ್‌ನ ಅತ್ಯಂತ ಬ್ಯುಸಿ ನಟಿಯರಲ್ಲೊಬ್ಬರೆನಿಸಿದ್ದ ಪ್ರಿಯಾಂಕಾ, ಈಗ ಹಲವು ಹಿಂದಿ ಚಿತ್ರಗಳಿಗೆ ನೋ ಎಂದಿದ್ದಾರೆ. 2010ರಲ್ಲಿ ತೆರೆಕಂಡ ‘‘ವಿ ಆರ್ ಫ್ಯಾಮಿಲಿ’ ಚಿತ್ರದ ನಿರ್ದೇಶಕ ಸಿದ್ಧಾರ್ಥ ಮಲ್ಹೋತ್ರಾ ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಆಕೆ ಒಲ್ಲೆ ಎಂದಿದ್ದಾರೆ. ಪ್ರತಿಷ್ಠಿತ ಯಶ್‌ರಾಜ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ತಯಾರಾಗಲಿರುವ ‘ಬಯೋಪಿಕ್’ಚಿತ್ರಕ್ಕಾಗಿ ಮಲ್ಹೋತ್ರಾ ಆಕೆಯನ್ನು ಸಂಪರ್ಕಿಸಿದ್ದರು. ಪ್ರತಿಷ್ಠಿತ ಬ್ಯಾನರ್‌ನ ಚಿತ್ರವಾದರೂ ಪ್ರಿಯಾಂಕಾ ಮುಲಾಜಿಲ್ಲದೆ ಒಲ್ಲೆ ಎಂದಿದ್ದಾಳಂತೆ. ಆದರೆ ಇದಕ್ಕೆ ಪ್ರಿಯಾಂಕಾ ಹೇಳುವ ಕಾರಣವೇ ಬೇರೆ. ಆ ಚಿತ್ರದಲ್ಲಿ ತನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿಲ್ಲದಿರುವುದೇ ತಾನು ಆ ಚಿತ್ರವನ್ನು ನಿರಾಕರಿಸಲು ಕಾರಣವೆಂದು ಆಕೆ ಹೇಳುತ್ತಿದ್ದಾಳೆ. ಇದೀಗ ಸಿದ್ಧಾರ್ಥ ತನ್ನ ಮಹತ್ವಾಕಾಂಕ್ಷೆಯ ಈ ಚಿತ್ರಕ್ಕೆ ಇನ್ನೋರ್ವ ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಏನೇ ಇದ್ದರೂ ಪ್ರಿಯಾಂಕಾ, ಬಾಲಿವುಡ್ ಚಿತ್ರಗಳನ್ನು ನಿರಾಕರಿಸುವ ಮೂಲಕ ತಾನು ಹತ್ತಿದ ಏಣಿಯನ್ನೇ ಮರೆಯುತ್ತಿ ದ್ದಾರೆಂಬ ಟೀಕೆ ಕೇಳಿಬರುತ್ತಿವೆ.