×
Ad

ಅಜಯ್ ಈಗ ಶಿವಾಯ್

Update: 2016-08-14 12:15 IST

ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟ ಅಜಯ್‌ದೇವಗನ್, ಹಿಟ್ ಚಿತ್ರಗಳನ್ನು ನೀಡದೆ ಬಹಳ ಸಮಯ ವಾಯಿತು. 2014ರಲ್ಲಿ ತೆರೆಕಂಡ ಸಿಂಗಂ- ರಿಟರ್ನ್ಸ್ ಚಿತ್ರದ ಬಳಿಕ ಅವರ ಯಾವ ಚಿತ್ರಕ್ಕೂ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಕಳೆದ ವರ್ಷ ತೆರೆಕಂಡ ದೃಶ್ಯಂ ಕೂಡಾ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಲಿಲ್ಲ. ಆದರೆ ಇದೀಗ ಅಜಯ್ ‘ಶಿವಾಯ್ ಚಿತ್ರದ ಮೂಲಕ, ವಾಪಸಾಗುತ್ತಿದ್ದಾರೆ. ಅಜಯ್‌ದೇವಗನ್ ಈ ಚಿತ್ರವನ್ನು ನಿರ್ಮಿಸಿರುವ ಜೊತೆಗೆ ನಿರ್ದೇಶನ ಕೂಡಾ ಮಾಡಿದ್ದಾರೆ. ಪಕ್ಕಾ ಆ್ಯಕ್ಷನ್ ಹಾಗೂ ಥ್ರಿಲ್ಲರ್ ಚಿತ್ರವಾದ ಶಿವಾಯ್‌ನ ಟ್ರೇಲರ್ ಈಗಾಗಲೇ ಹೊರಬಂದಿದ್ದು, ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಆಯೇಷಾ ಸೈಗಲ್ ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ಮೊದಲು ಆಕೆ ‘ಅಖಿಲ್’ ಎಂಬ ತೆಲುಗು ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದರು. ಆಲಿ ಕಾಸ್ಮಿ, ವೀರ್‌ದಾಸ್, ಎರಿಕಾ ಕಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರವು ಅಜಯ್‌ಗೆ ಹೊಸ ಇಮೇಜ್ ತಂದುಕೊಡಲಿದೆಯೆಂಬ ಮಾತುಗಳು ಬಾಲಿವುಡ್‌ನಲ್ಲಿ ಬಲವಾಗಿ ಕೇಳಿಬರುತ್ತಿವೆ. ಗಿರೀಶ್ ಕಾರ್ನಾಡ್ ಕೂಡಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಶಿವಾಯ್ ಕಳೆದ ವರ್ಷವೇ ತೆರೆಕಾಣಬೇಕಿತ್ತು. ಆದರೆ ಅಜಯ್ ತಾನು ಈ ಮೊದಲೇ ಕಮಿಟ್ ಆಗಿದ್ದ ‘ದೃಶ್ಯಂ’ ಹಾಗೂ ‘ಸನ್ ಆಫ್ ಸರ್ದಾರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ಶಿವಾಯ್‌ನ ಶೂಟಿಂಗ್ ಮುಂದೂಡ ಲ್ಪಟ್ಟಿತ್ತು. ಕೌಟುಂಬಿಕ ಹಿನ್ನೆಲೆಯ ಆ್ಯಕ್ಷನ್ ಚಿತ್ರವಾಗಿ ರುವ ಶಿವಾಯ್‌ನಲ್ಲಿ ಅಮಾಯಕ ನೊಬ್ಬ, ಅಸ್ತಿತ್ವಕ್ಕಾಗಿ ತನ್ನನ್ನು ನಾಶಪಡಿಸಲು ಹೊರಟವರ ವಿರುದ್ಧವೇ ಸಮರ ಸಾರುವ ಕಥಾ ವಸ್ತುವನ್ನು ಹೊಂದಿದೆ. ಹಾಲಿವುಡ್ ಶೈಲಿಯ ತಂತ್ರಜ್ಞಾನ ಹೊಂದಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾನಿರ್ದೇಶಕ ಸಾಬುಸಿರಿಲ್ ಕೂಡಾ ದುಡಿದಿದ್ದಾರೆ.ಎಲ್ಲವೂ ಸರಿಹೋದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಅಂದರೆ ಅಕ್ಟೋಬರ್ 28ರಂದು ‘ಶಿವಾಯ್’ ಬೆಳ್ಳಿತೆರೆಗಪ್ಪಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News