×
Ad

ಸ್ಯಾಂಡಲ್‌ವುಡ್‌ಗೆ ತಮನ್ನಾ

Update: 2016-08-14 12:17 IST

ಶಿವರಾಜ್‌ಕುಮಾರ್, ಸುದೀಪ್ ಅಭಿನಯದಲ್ಲಿ ಪ್ರೇಮ್ ನಿರ್ದೇಶಿಸುತ್ತಿರುವ ಚಿತ್ರದ ಹೆಸರು ಕೊನೆಗೂ ಫೈನಲೈಸ್ ಆಗಿದೆ. ‘ವಿಲನ್’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಸ್ವತಃ ಪ್ರೇಮ್ ಈ ವಿಷಯವನ್ನು ದೃಢಪಡಿಸಿದ್ದಾರೆ. ಅಂದಹಾಗೆ 100 ಕೋಟಿ ರೂ. ಬಜೆಟ್‌ನ ಚಿತ್ರದಲ್ಲಿ ನಟಿಸಲು ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಒಪ್ಪಿಕೊಂಡಿದ್ದಾರಂತೆ. ಮುಂದಿನ 2-3 ವರ್ಷಗಳವರೆಗೆ ತಮನ್ನಾ ಬ್ಯುಸಿಯಾಗಿದ್ದರೂ, ವಿಲನ್ ಚಿತ್ರದ ಸ್ಕ್ರಿಪ್ಟ್ ಇಷ್ಟವಾದ ಕಾರಣ ಆಕೆ ಓಕೆ ಅಂದಿದ್ದಾರೆ. ಈ ಚಿತ್ರದ ಮೂಲಕ ತಮನ್ನಾ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್ ಪ್ರವೇಶಿಸಲಿದ್ದಾರೆ. ಈ ಮೊದಲು ಕೆಲವು ನಿರ್ಮಾಪಕರು ತಮನ್ನಾರನ್ನು ತಮ್ಮ ಚಿತ್ರಗಳಲ್ಲಿ ನಟಿಸಲು ಆಹ್ವಾನಿಸಿದ್ದರೂ, ಆಕೆ ನಯವಾಗಿಯೇ ನಿರಾಕರಿಸಿದ್ದಳು.

ತಮಿಳು ಹಾಗೂ ತೆಲುಗಿನಲ್ಲಿ ಬಿಡುವಿಲ್ಲದ ತಾರೆಯಾದ ತಮನ್ನಾ, ಸದ್ಯ ಧರ್ಮದೊರೈ ಹಾಗೂ ವಿಜಯ್ ಸೇತುಪತಿ ನಿರ್ದೇಶನದ ತಮಿಳುಚಿತ್ರಗಳ ಶೂಟಿಂಗ್ ಮುಗಿಸಿದ್ದಾರೆ. ಈಗ ಆಕೆ ಬಾಹುಬಲಿ-2ನಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ತಮನ್ನಾ ತಮಿಳು-ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣಗೊಳ್ಳಲಿರುವ ಅಭಿನೇತ್ರಿ ಎಂಬ ಹಾರರ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್ ಕೂಡಾ ಆಕೆಯನ್ನು ಮತ್ತೊಮ್ಮೆ ಕೈಬೀಸಿ ಕರೆದಿದೆ. ‘ಚೆನ್ನೈ ಎಕ್ಸ್ ಪ್ರೆಸ್’ ಖ್ಯಾತಿಯ ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣಗೊಳ್ಳಲಿರುವ ಚಿತ್ರದಲ್ಲಿ ತಮನ್ನಾ ರಣವೀರ್‌ಸಿಂಗ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮನ್ನಾ ಈ ಮೊದಲು ಹಿಮ್ಮತ್‌ವಾಲಾ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಿದ್ದರು. ಆದರೆ ಆ ಚಿತ್ರವು ನಿರೀಕ್ಷಿತ ಗೆಲುವನ್ನು ಕಾಣಲು ವಿಫಲವಾಗಿತ್ತು. ಇನ್ನು ವಿಲನ್ ವಿಷಯಕ್ಕೆ ಬರುವುದಾದರೆ, ಈ ಚಿತ್ರದಲ್ಲಿ ಇಬ್ಬರು ನಾಯಕರಲ್ಲದೆ, ಹೀರೋಯಿನ್ ಹಾಗೂ ತಾಯಿ ಹೀಗೆ ಒಟ್ಟು ನಾಲ್ಕು ಮುಖ್ಯಪಾತ್ರಗಳಿವೆ. ತಾಯಿಯ ಪಾತ್ರಕ್ಕಾಗಿ ಬಾಲಿವುಡ್‌ನ ಪ್ರಸಿದ್ಧ ನಟಿ ರೇಖಾ ಅಥವಾ ಮಲಯಾಳಂ ಬೆಡಗಿ ಶೋಭನಾ ಅವರನ್ನು ಕರೆತರಲು ನಿರ್ದೇಶಕ ಪ್ರೇಮ್ ಯೋಚಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News