‘ಔಟ್‌ಲುಕ್ ಚಂದಾಹಣ ಮರಳಿಸಿ’

Update: 2016-08-14 12:51 GMT

ಬೆಂಗಳೂರು, ಆ. 14: ಔಟ್‌ಲುಕ್ ಆಂಗ್ಲ ವಾರಪತ್ರಿಕೆಯ ಮುಖ್ಯ ಸಂಪಾದಕ ಕೃಷ್ಣ ಪ್ರಸಾದ್ ಅವರನ್ನು ಸಂಸ್ಥೆ ವಜಾ ಮಾಡಿರುವುದರ ವಿರುದ್ಧ ಇದೀಗ ಓದುಗರು ದೇಶಾದ್ಯಂತ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.

ಔಟ್‌ಲುಕ್ ಚಂದಾ ಹಣ ವಾಪಾಸ್ ಮಾಡಿ’ ‘ಔಟ್‌ಲುಕ್ ಚಂದಾ ಹಣ ಕೊಡದಿದ್ದರೂ ಪರವಾಗಿಲ್ಲ, ಪತ್ರಿಕೆ ಕಳುಹಿಸಬೇಡಿ’ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದೆ. ಆರೆಸ್ಸೆಸ್ ಸಂಘಟನೆಯು ಬುಡಕಟ್ಟು ಬಾಲಕಿಯರನ್ನು ಅಪಹರಿಸುತ್ತಿರುವ ತನಿಖಾ ವರದಿಯೊಂದನ್ನು ಕೃಷ್ಣ ಪ್ರಸಾದ್ ಪತ್ರಿಕೆಯಲ್ಲಿ ಪ್ರಕಟಿಸಿದ್ದು ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು. ಇದೀಗ ಹೊರಗಿನ ಒತ್ತಡದಿಂದ ಸಂಸ್ಥೆಯು, ತನಿಖಾ ವರದಿ ಪ್ರಕಟಿಸಿದ ಪ್ರಧಾನಸಂಪಾದಕ ಕೃಷ್ಣಪ್ರಸಾದ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.

 ಔಟ್‌ಲುಕ್ ಸಂಸ್ಥೆ ರಾಜಕೀಯ ಒತ್ತಡಕ್ಕೆ ಮಣಿದು ಈ ತೀರ್ಮಾನವನ್ನು ತೆಗೆದುಕೊಂಡಿದೆ ಎನ್ನುವುದು ಓದುಗರ ಅಭಿಪ್ರಾಯವಾಗಿದೆ. ‘ಇದು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಸಂಸ್ಥೆ ನಡೆಸಿರುವ ಹಲ್ಲೆಯಾಗಿದೆ. ಓದುಗರಿಗೆ ಸತ್ಯವನ್ನು ತಿಳಿಸಿದ ಸಂಪಾದಕರನ್ನು ವಜಾಗೊಳಿಸಿರುವುದು, ಓದುಗರಿಗೂ ಮಾಡಿದ ದ್ರೋಹವಾಗಿದೆ’’ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಔಟ್‌ಲುಕ್ ಸಂಸ್ಥೆಗೂ ಓದುಗರು ನೇರವಾಗಿ ತಮ್ಮ ಅನಿಸಿಕೆಗಳನ್ನು ದಾಖಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News